ರಾಷ್ಟ್ರ ರಾಜಧಾನಿಯಲ್ಲಿ ಡೀಸೆಲ್ ಬಸ್‌ಗಳ ಸಂಚಾರ ನಿಷೇಧ – ನವೆಂಬರ್ 1 ರಿಂದ ಕಾನೂನು ಜಾರಿಗೆ
ನವದೆಹಲಿ : ವಾಯುಮಾಲಿನ್ಯ ನಿಯಂತ್ರಣಕ್ಕಾಗಿ ರಾಷ್ಟ್ರ ರಾಜಧಾನಿಯಲ್ಲಿ ಡೀಸೆಲ್ ಬಸ್‌ಗಳ ಸಂಚಾರ ನಿಷೇಧಿಸಲಾಗಿದೆ. ನವೆಂಬರ್ 1 ರಿಂದ ಈ ಕಾನೂನು ಜಾರಿಗೆ ಬರಲಿದೆ. ನವೆಂಬರ್ 1ರಿಂದ ದೆಹಲಿ ಮತ್ತು ಎನ್‌ಸಿಆರ್ ಪ್ರದೇಶದಲ್ಲಿ ಡೀಸೆಲ್ ಚಾಲಿತ ಬಸ್‌ಗಳನ್ನು ಓಡಿಸಲು ಅನುಮತಿಸುವುದಿಲ್ಲ ಎಂದು ವಾಯು ಗುಣಮಟ್ಟ ನಿರ್ವಹಣಾ ಆಯೋಗ ಘೋಷಿಸಿದೆ. ಡೀಸೆಲ್ ಬಸ್‌ಗಳನ್ನು ಸ್ಥಗಿತಗೊಳಿಸಿ ಎಲೆಕ್ಟ್ರಿಕ್, ಸಿಎನ್‌ಜಿ ಮತ್ತು ಬಿಎಸ್ 6 ಡೀಸೆಲ್ ಬಸ್‌ಗಳಿಗೆ ಮಾತ್ರ ಅನುಮತಿಸಲಾಗುವುದು. ಜೊತೆಗೆ ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಪಟಾಕಿ ಸಿಡಿಸುವುದನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ದೆಹಲಿ ಸರ್ಕಾರ ಕೇಂದ್ರವನ್ನು ಕೋರಿದೆ. ಅಕ್ಟೋಬರ್‌ನಿಂದ ಫೆಬ್ರವರಿವರೆಗೆ ದೆಹಲಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಯುಮಾಲಿನ್ಯವು ಅತಿ ಹೆಚ್ಚಾಗಿದೆ. ಇದನ್ನು ತಡೆಯಲು ಕಾರ್ಖಾನೆಗಳನ್ನು ಮುಚ್ಚುವುದು, ಸಮ-ಬೆಸ ರೀತಿಯಲ್ಲಿ ವಾಹನಗಳನ್ನು ರಸ್ತೆಗಿಳಿಸುವುದು, ಹೆಚ್ಚು ಮಾಲಿನ್ಯ ಹೊರಸೂಸುವ ವಾಹನಗಳನ್ನು ನಿಷೇಧಿಸುವುದು, ಪಟಾಕಿ ಸಿಡಿಸದಂತೆ ಹಲವು ಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಎಷ್ಟೇ ಕ್ರಮಗಳನ್ನು ಕೈಗೊಂಡರೂ ಅವು ತಾತ್ಕಾಲಿಕ ಕ್ರಮಗಳಾಗುತ್ತಿವೆ. ಇತ್ತೀಚೆಗೆ ಈ ವರ್ಷವೂ ಹಲವು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದ್ದರೂ ವಾಯುಮಾಲಿನ್ಯ ತಗ್ಗದೆ ಮಿತಿಮೀರುತ್ತಲೇ ಇದೆ.