Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ರಾಹುಲ್ ಗಾಂಧಿ ಯಾತ್ರೆ 2.0: ‘ಮಣಿಪುರದಿಂದ ಮುಂಬೈಗೆ’ ಜನವರಿ 14ರಂದು ಚಾಲನೆ

ನವದೆಹಲಿ: ಭಾರತ್ ಜೋಡೋ ಯಾತ್ರೆಯ ಎರಡನೇ ಹಂತವನ್ನು ಆರಂಭಿಸಲು ಕಾಂಗ್ರೆಸ್ ನಿರ್ಧರಿಸಿದ್ದು, ಈ ಯಾತ್ರೆಯೂ ಜನವರಿ 14 ರಿಂದ ಆರಂಭವಾಗಲಿದ್ದು , ಪೂರ್ವದಿಂದ ಪಶ್ಚಿಮದವರೆಗೆ 14 ರಾಜ್ಯಗಳಲ್ಲಿ ಈ ಯಾತ್ರೆ ಹಾದುಹೋಗಲಿದೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಸಾಗುವ ಈ ಯಾತ್ರೆಗೆ ‘ಭಾರತ್ ನ್ಯಾಯ್ ಯಾತ್ರೆ’ ಎಂದು ಮರುನಾಮಕರಣ ಮಾಡಲಾಗಿದ್ದು, ಈಶಾನ್ಯ ಭಾರತದ ಮಣಿಪುರದಿಂದ ಆರಂಭಗೊಂಡು ಪಶ್ಚಿಮ ಭಾಗವಾದ ಮಹಾರಾಷ್ಟ್ರದ ಮುಂಬೈನಲ್ಲಿ ಮುಕ್ತಾಯಗೊಳ್ಳುವ ಮೂಲಕ ದೇಶದ ಪೂರ್ವದಿಂದ ಪಶ್ಚಿಮದವರೆಗೆ ಈ ಯಾತ್ರೆ ಸಾಗಲಿದೆ.

ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಜನವರಿ 14 ರಂದು ಮಣಿಪುರದಿಂದ ಪಾದಯಾತ್ರೆಗೆ ಚಾಲನೆ ನೀಡಲಿದ್ದು, ಜನವರಿ 14 ಮತ್ತು ಮಾರ್ಚ್ 20 ರ ನಡುವೆ ಭಾರತ್ ನ್ಯಾಯ್ ಯಾತ್ರೆಯೂ 14 ರಾಜ್ಯಗಳ 85 ಜಿಲ್ಲೆಗಗಳಲ್ಲಿ ಹಾದುಹೋಗಲಿದೆ. ಮಣಿಪುರ, ನಾಗಾಲ್ಯಾಂಡ್, ಅಸ್ಸಾಂ, ಮೇಘಾಲಯ, ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್, ಒಡಿಶಾ, ಉತ್ತರ ಪ್ರದೇಶ, ಮಧ್ಯಪ್ರದೇಶ, ಛತ್ತೀಸ್‌ಗಢ, ರಾಜಸ್ಥಾನ, ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ಸುಮಾರು 6,200 ಕಿಲೋಮೀಟರ್‌ಗಳಲ್ಲಿ ಯಾತ್ರೆ ಚಲಿಸಲಿದೆ.

ಕನಿಷ್ಟ ಸಮಯದಲ್ಲಿಗರಿಷ್ಟ ಜನರನ್ನು ತಲುಪುವ ಉದ್ದೇಶದಿಂದ ಭಾರತ್ ನ್ಯಾಯ್ ಯಾತ್ರೆಯೂ ಬಸ್ ಗಳ ಮೂಲಕ ಸಾಗಲಿದ್ದು, ಪಾದಯಾತ್ರೆ ಕೊಂಚ ಮಾತ್ರ ಇರಲಿದೆ.

ಭಾರತ್ ಜೋಡೋ ಯಾತ್ರೆಯ ಮೊದಲ ಹಂತವು 2022ರ ಸೆಪ್ಟೆಂಬರ್ 7 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಪ್ರಾರಂಭವಾಗಿ ಜನವರಿ 2023 ರಲ್ಲಿ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಅಂತ್ಯವಾಯಿತು. ಇದು 126 ದಿನಗಳಲ್ಲಿ 12 ರಾಜ್ಯಗಳ 75 ಜಿಲ್ಲೆಗಳ ಮೂಲಕ ಸರಿಸುಮಾರು 4,080 ಕಿಲೋಮೀಟರ್ ದೂರವನ್ನು ಕ್ರಮಿಸಿತು ಇದು ಭಾರತದ ಅತೀ ಉದ್ದದ ಪಾದಯಾತ್ರೆ ಎಂದು ಗುರುತಿಸಲಾಗಿದೆ.