ವಿದ್ಯಾರ್ಥಿಗಳನ್ನು ಮಲದ ಗುಂಡಿಗೆ ಇಳಿಸಿ ಸ್ವಚ್ಛತೆ- ಕೋಲಾರದ ಶಾಲೆಯಲ್ಲಿ ಅಮಾನವೀಯ ಘಟನೆ
ಕೋಲಾರ: ಶಾಲಾ ಪ್ರಾಂಶುಪಾಲರು, ಶಿಕ್ಷಕರ ಎದುರಲ್ಲೇ ವಿದ್ಯಾರ್ಥಿಗಳನ್ನು ಮಲದ ಗುಂಡಿಗೆ ಇಳಿಸಿ ಸ್ವಚ್ಛತೆ ಮಾಡಿಸಿರುವ ಅಮಾನವೀಯ ಘಟನೆ ಕೋಲಾರದ ಜಿಲ್ಲೆ ಮಾಲೂರು ತಾಲ್ಲೂಕು ಯಲವಳ್ಳಿ ಗ್ರಾಮದ ಬಳಿ ಇರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದಿದೆ. ಪ್ರಾಂಶುಪಾಲರ ಎದುರಲ್ಲೇ ಸಿಬ್ಬಂದಿ, ಮಕ್ಕಳನ್ನು ಮಲದ ಗುಂಡಿಗೆ ಇಳಿಸಿ ಕ್ಲೀನ್ ಮಾಡಿಸಿದ್ದಾರೆ.
ಅಮಾನವೀಯ ಕೃತ್ಯದ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಸ್ಥಳಕ್ಕೆ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಸತಿ ಶಾಲೆಯಲ್ಲಿ ಸುಮಾರು 250 ಹೆಚ್ಚು ಮಕ್ಕಳಿದ್ದಾರೆ. ಮಕ್ಕಳಿಗೆ ಕಿರುಕುಳ ನೀಡಿರುವ ಶಿಕ್ಷಕರ ವಿರುದ್ಧ ಕ್ರಮಕ್ಕೆ ಪೋಷಕರು ಆಗ್ರಹಿಸಿದ್ದಾರೆ.
ಎಲ್ಲಾ ಮಕ್ಕಳೂ ಪರಿಶಿಷ್ಟ ಸಮುದಾಯಕ್ಕೆ ಸೇರಿದವರು ಎನ್ನಲಾಗಿದೆ. ಅದು ಮಲದ ಗುಂಡಿ ಅಲ್ಲ ಸ್ವಚ್ಛತಾ ಅಂದೋಲನ ಅಂಗವಾಗಿ ಚೇಂಬರ್ ಒಳಗೆ ಇಳಿಸಿ ಸ್ವಚ್ಛಗೊಳಿಸಲಾಗಿದೆ ಎಂದು ಪ್ರಾಂಶುಪಾಲರು ಭಾರತಮ್ಮ ಸಮಜಾಯಿಷಿ ನೀಡಿದ್ದಾರೆ.
ಚೇಂಬರ್ನೊಳಗಾದರೂ ನಮ್ಮ ಮಕ್ಕಳನ್ನು ಏಕೆ ಇಳಿಸಬೇಕು ಎಂದು ಪೋಷಕರು ಪ್ರಶ್ನಿಸಿದ್ದಾರೆ.
ಈ ಕುರಿತು ಮಾತನಾಡಿರುವ ಕೋಲಾರ ಜಿಲ್ಲಾಧಿಕಾರಿ ಅಕ್ರಂ ಪಾಷಾ ಅವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆದೇಶಿಸಲಾಗಿದೆ ಎಂದು ಹೇಳಿದ್ದಾರೆ.