Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ವಿವಾಹ ಸಮಾರಂಭದಲ್ಲಿ ಭೀಕರ ಅಗ್ನಿಅವಘಡ -114 ಸಜೀವ ದಹನ, 150ಕ್ಕೂ ಹೆಚ್ಚು ಮಂದಿ ಗಂಭೀರ

ಇರಾಕ್‌: ವಿವಾಹ ಸಮಾರಂಭ ನಡೆಯುತ್ತಿದ್ದ ಸಭಾಂಗಣದಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ 114ಮಂದಿ ಸಜೀವ ದಹನಗೊಂಡು 150ಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡಿರುವ ಘಟನೆ ಉತ್ತರ ಇರಾಕ್ ನಲ್ಲಿ ಸಂಭವಿಸಿದೆ.

ಇರಾಕ್‌ನ ನಿನೆವೆ ಪ್ರಾಂತ್ಯದ ಹಮ್ದನಿಯಾ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಇದು ಪ್ರಧಾನವಾಗಿ ಕ್ರಿಶ್ಚಿಯನ್ ಸಮುದಾಯವೇ ಹೆಚ್ಚಾಗಿ ನೆಲೆಸಿರುವ ಪ್ರದೇಶವಾಗಿದ್ದು, ರಾಜಧಾನಿ ಬಾಗ್ದಾದ್‌ನ ವಾಯುವ್ಯಕ್ಕೆ ಸುಮಾರು 335 ಕಿಲೋಮೀಟರ್ ದೂರದಲ್ಲಿನ ಪ್ರದೇಶವಾಗಿದೆ. ಮಂಗಳವಾರ ರಾತ್ರಿ ಸ್ಥಳೀಯ ಕಾಲಮಾನ ಸುಮಾರು 10:45ಕ್ಕೆ (19:45 GMT) ಈ ಅನಾಹುತ ಸಂಭವಿಸಿದೆ.

ಮದುವೆ ಸಮಾರಂಭ ನಡೆಯುತ್ತಿದ್ದ ವೇಳೆ ಏಕಾಏಕಿ ಬೆಂಕಿ ಕಾಣಿಸಿಕೊಂಡು ಅವಘಡ ಸಂಭವಿಸಿದೆ. ಪರಿಣಾಮ ಬೆಂಕಿ ಹಾಲ್ ನಲ್ಲಿರುವ ಪರದೆಗಳಿಗೆ ಆವರಿಸಿಕೊಂಡು ಇಡೀ ಸಭಾಂಗಣವನ್ನು ಆವರಿಸಿಕೊಂಡು ಸಮಾರಂಭದಲ್ಲಿ ಭಾಗಿಯಾಗಿದ್ದವರು ಗಾಬರಿಯಿಂದ ಹೊರ ಓಡಿ ಬರುವಾಗ ನೂಕುನುಗ್ಗಲು ಸಂಭವಿಸಿ ಬೆಂಕಿಗೆ ಆಹುತಿಯಾಗಿದ್ದಾರೆ.

ಬೆಂಕಿ ಅವಘಡಕ್ಕೆ ಯಾವುದೇ ಅಧಿಕೃತ ಕಾರಣ ಪತ್ತೆಯಾಗದಿದ್ದರೂ, ಆಚರಣೆಯ ಸಂದರ್ಭದಲ್ಲಿ ಬಳಸಿದ ಪಟಾಕಿಗಳು ಬೆಂಕಿಗೆ ಕಾರಣವಾಗಿರಬಹುದು ಎಂದು ಪ್ರಾಥಮಿಕ ವರದಿಗಳು ಸೂಚಿಸಿವೆ ಎಂದು ಇರಾಕ್‌ನ ನಾಗರಿಕ ರಕ್ಷಣಾ ಇಲಾಖೆ ತಿಳಿಸಿದೆ.

ಘಟನೆ ಸಂಭವಿಸಿದ ಕೂಡಲೇ ಅಡುಗೆಗೆ ಬಳಸಿದ್ದ ಹೆಚ್ಚಿನ ಗ್ಯಾಸ್ ಸಿಲಿಂಡರ್ ಗಳನ್ನು ಹೊರ ಹಾಕಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆರೋಗ್ಯ ಸಚಿವಾಲಯದ ವಕ್ತಾರ ಸೈಫ್ ಅಲ್-ಬದರ್ ಅವರು ಸರ್ಕಾರಿ ಇರಾಕಿ ನ್ಯೂಸ್ ಏಜೆನ್ಸಿ ಮೂಲಕ ಅಪಘಾತದ ಅಂಕಿಅಂಶವನ್ನು ನೀಡಿದ್ದಾರೆ.