Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಶಕ್ತಿಯೋಜನೆಗಾಗಿ ಹೊಸದಾಗಿ ಸಾವಿರಕ್ಕೂ ಅಧಿಕ ಬಸ್‌ಗಳ ಖರೀದಿ ಮುಂದಾದ ಸರಕಾರ

ಬೆಂಗಳೂರು : ಶಕ್ತಿ ಯೋಜನೆಯನ್ನು ಬಲಪಡಿಸುವ ಸಲುವಾಗಿ ಇದೀಗ ಹೊಸದಾಗಿ ಒಂದು ಸಾವಿರಕ್ಕೂ ಅಧಿಕ ಬಸ್‌ಗಳ ಖರೀದಿಗೆ ರಾಜ್ಯ ಸರಕಾರ ಮುಂದಾಗಿದೆ.

ಸಾರಿಗೆಯ ನಾಲ್ಕು ನಿಗಮಗಳಲ್ಲಿ ಬಸ್‌ ಖರೀದಿಸಲು ವಿಶೇಷ ಬಂಡವಾಳ ನೆರವು ಅಡಿಯಲ್ಲಿ ಈಗಾಗಲೇ ಸರಕಾರದಿಂದ 500 ಕೋಟಿ ರೂ. ಮಂಜೂರು ಮಾಡಲಾಗಿದೆ. ಬಸ್ ಖರೀದಿಸುವ ಪ್ರಸ್ತಾವನೆಗೆ ಸಚಿವ ಸಂಪುಟವು ಸಭೆ ಗುರುವಾರ ಒಪ್ಪಿಗೆ ನೀಡಿದೆ.

ಕೆಎಸ್ಸಾರ್ಟಿಸಿಯಿಂದ 100 ಕೋಟಿ ರೂ.ವೆಚ್ಚದಲ್ಲಿ 250 ಹೊಸ ಬಸ್ಸುಗಳು, ವಾಯುವ್ಯ ರಾಜ್ಯ ರಸ್ತೆ ಸಾರಿಗೆ ನಿಗಮವು 150 ಕೋಟಿ ರೂ.ವೆಚ್ಚದಲ್ಲಿ 375 ಹೊಸ ಬಸ್ಸುಗಳು, ಎಸಿ ಎಲೆಕ್ಟ್ರಿಕ್ ಬಸ್ಸುಗಳನ್ನು 150 ಕೋಟಿ ರೂ.ಅಂದಾಜು ಮೊತ್ತದಲ್ಲಿ ಖರೀದಿಸಲು ಅನುಮತಿ ನೀಡಲಾಗಿದೆ ಎಂದು ಗುರುವಾರ ಸಚಿವ ಸಂಪುಟ ಸಭೆ ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಎಚ್.ಕೆ.ಪಾಟೀಲ್ ಮಾಧ್ಯಮಗಳಿಗೆ ತಿಳಿಸಿದ್ದರು.

ಇದರ ಜೊತೆಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಖಾಲಿಯಿರುವ 13,000 ಚಾಲಕ ಮತ್ತು ನಿರ್ವಾಹಕರನ್ನು ನೇಮಕ ಮಾಡಲು ಸರ್ಕಾರದಿಂದ ಅನುಮೋದನೆ ದೊರೆತಿದ್ದು, ಆರ್ಥಿಕ ಇಲಾಖೆ ಅನುಮತಿ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.