Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಶಬರಿಮಲೆ ಅಯ್ಯಪ್ಪನ ದರ್ಶನಕ್ಕೆ ಹೊರಟ ಕ್ರೈಸ್ತ ಪಾದ್ರಿ- ಪರವಾನಿಗೆ ರದ್ದು ಪಡಿಸಿದ ಭಾರತೀಯ ಆಂಗ್ಲಿಕನ್ ಚರ್ಚ್

ಕೇರಳ : ಶಬರಿಮಲೆ ವಿಚಾರದಲ್ಲಿ ಕೇರಳದಲ್ಲಿ ಮತ್ತೊಂದ ವಿವಾದ ಉಂಟಾಗಿದ್ದು, 41 ದಿನಗಳ ವೃತ ಆಚರಿಸಿ ಶಬರಿಮಲೆ ಅಯ್ಯಪ್ಪನ ದರ್ಶನಕ್ಕೆ ಹೊರಟಿದ್ದ ಕ್ರೈಸ್ತ ಪಾದ್ರಿಯೊಬ್ಬರ ಮೇಲೆ ಚರ್ಚ್ ನ ಪಾದ್ರಿಯಾಗಿ ಕರ್ತವ್ಯಗಳನ್ನು ನಿರ್ವಹಿಸದಂತೆ ಭಾರತೀಯ ಆಂಗ್ಲಿಕನ್ ಚರ್ಚ್ ನಿರ್ಬಂಧ ವಿಧಿಸಿದೆ ಅಲ್ಲದೆ ತಮ್ಮ ಕರ್ತವ್ಯ ನಿಭಾಯಿಸಲು ನೀಡಿದ್ದ ಪರವಾನಗಿ ಹಾಗೂ ಗುರುತಿನ ಚೀಟಿಯನ್ನು ವಾಪಸ್ ಪಡೆದುಕೊಂಡಿದೆ.

ತಿರುವನಂತಪುರಂ ಮೂಲದವರಾದ ಪಾದ್ರಿ ರೆವರೆಂಡ್ ಡಾ ಮನೋಜ್ ಕೆಜಿ ಅವರು, ಶಬರಿಮಲೆ ದೇವಸ್ಥಾನಕ್ಕೆ ಭೇಟಿ ನೀಡುವುದಾಗಿ ಹೇಳಿದಾಗಿನಿಂದ ಸುದ್ದಿಯಲ್ಲಿದ್ದಾರೆ. ಇದು ತಮ್ಮ ಧರ್ಮದೆಡೆಗಿನ ಸಂಪೂರ್ಣ ಬದ್ಧತೆಯನ್ನು ಉಳಿಸಿಕೊಂಡು, ಇತರೆ ಧರ್ಮಗಳ ಕುರಿತು ಕಲಿಯುವ ಪ್ರಯತ್ನದ ಭಾಗವಾಗಿದೆ ಎಂದು 50 ವರ್ಷದ ಮನೋಜ್ ತಿಳಿಸಿದ್ದಾರೆ. ವೃತ್ತಿಯಿಂದ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಡಾ ಮನೋಜ್ ಅವರು, 2010ರಲ್ಲಿ ಆಧ್ಯಾತ್ಮಿಕ ಆಸಕ್ತಿ ಬೆಳೆಸಿಕೊಂಡಿದ್ದರು. 2015ರಲ್ಲಿ ತಮ್ಮ ಉದ್ಯೋಗ ತೊರೆದ ಅವರು ಪೂರ್ಣ ಪ್ರಮಾಣದ ಅಧ್ಯಾತ್ಮಿಕ ಜೀವನ ಆಯ್ದುಕೊಂಡಿದ್ದರು. 2022ರಲ್ಲಿ ಪಾದ್ರಿ ಮಾನ್ಯತೆ ಪಡೆದಿದ್ದರು.
ಈ ನಡುವೆ ಶಬರಿಮಲೆ ಅಯ್ಯಪ್ಪನ ದರ್ಶನಕ್ಕೆ ತೆರಳಬೇಕೆಂದು ನಿರ್ಧಾರ ಮಾಡಿದ ಅವರು ಇತರ ಅಯ್ಯಪ್ಪನ ಭಕ್ತರಂತೆ 41 ದಿನಗಳ ವೃತ ಆಚರಿಸಿ ಶಬರಿಮಲೆಗೆ ತೆರಳಲು ನಿರ್ಧರಿಸಿದರು. ಈ ಸುದ್ದಿ ಹೊರ ಬೀಳುತ್ತಿದ್ದಂತೆ ಮನೋಜ್ ವಿರುದ್ದ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಆದರೂ ಪಾದ್ರಿ ಮನೋಜ್ ಅವರು ಈಗಾಗಲೇ ಶಬರಿಮಲೆ ಯಾತ್ರೆಗೆ ಉಪವಾಸ ವ್ರತ ಆರಂಭಿಸಲು ಸ್ಥಳೀಯ ದೇವಸ್ಥಾನದಿಂದ ಸಾಂಪ್ರದಾಯಿಕ ಜಪಮಾಲೆಯನ್ನು ಪಡೆದುಕೊಂಡು ಧರಿಸಿದ್ದಾರೆ. ಸೆಪ್ಟೆಂಬರ್ 20ರಂದು ಯಾತ್ರೆ ನಿಗದಿಯಾಗಿದೆ.

ಇನ್ನು ಶಬರಿಮಲೆಗೆ ತೆರಳುತ್ತಿರುವ ಬಗ್ಗೆ ಭಾರತೀಯ ಆಂಗ್ಲಿಕನ್ ಚರ್ಚ್ ವಿವರಣೆ ನೀಡಬೇಕೆಂದು ಕೇಳಿತ್ತು. ಆದರೆ, ವಿವರಣೆ ನೀಡುವ ಬದಲು ಈ ಚರ್ಚ್‌ಗೆ ಪಾದ್ರಿಯಾಗಿ ಬಂದಾಗ ನನಗೆ ನೀಡಲಾಗಿದ್ದ ಗುರುತಿನ ಚೀಟಿ ಹಾಗೂ ಪರವಾನಗಿಯನ್ನು ಹಿಂದಿರುಗಿಸಿದ್ದಾರೆ.ಈ ಬಗ್ಗೆ ಪೇಸ್ ಬುಕ್ ನಲ್ಲಿ ವಿಡಿಯೋ ಮಾಡಿರುವ ಅವರು ವ್ರತದ ಸುದ್ದಿ ಹೊರಬಿದ್ದಾಗ, ನನ್ನ ಸಮುದಾಯದ ಕೆಲವರು ಟೀಕಿಸಿದರು. ಚರ್ಚ್‌ನ ಆಡಳಿತ ಮಂಡಳಿ ನನ್ನ ಮುಂದಿನ ಯೋಜನೆಗಳ ಬಗ್ಗೆ ಕೇಳಿತು. ನನ್ನ ಧಾರ್ಮಿಕ ಪಂಥಕ್ಕೆ ಅದರದೇ ಆದ ನಿಯಮ, ನಿಬಂಧನೆ ಹಾಗೂ ರೂಢಿಗತ ಸಂಪ್ರದಾಯಗಳಿವೆ. ನನ್ನ ನಿರ್ಧಾರಕ್ಕೆ ಅವರು ಸಹಮತ ವ್ಯಕ್ತಪಡಿಸುವುದಿಲ್ಲ’ ಎಂದಿದ್ದಾರೆ.

ಇಷ್ಟೆಲ್ಲ ವಿವಾದವಾದರೂ, ಅಯ್ಯಪ್ಪನ ದರ್ಶನ ಮಾಡುವ ಯೋಜನೆಯಲ್ಲಿ ಯಾವುದೇ ಬದಲಾವಣೆಯಿಲ್ಲ. ಇದೇ 20ರಂದು ಶಬರಿಮಲೆಗೆ ತೆರಳುತ್ತಿದ್ದೇನೆ. ಯಾವುದೇ ತಪ್ಪು ಮಾಡಿಲ್ಲವೆಂಬ ಬಲವಾದ ನಂಬಿಕೆ ನನಗಿದೆ. ಹಿಂದೂ ಆಚರಣೆಗಳ ಹೊರತಾಗಿಯೂ ಆ ಧರ್ಮವನ್ನು ಅರಿಯುವುದು ನನ್ನ ಉದ್ದೇಶವಾಗಿದೆ’ ಎಂದು ಮಾಹಿತಿ ನೀಡಿದರು.