ಶಿವಮೊಗ್ಗ ಗಲಭೆ, ಕಲ್ಲು ತೂರಾಟ ಪ್ರೀ ಪ್ಲಾನ್ – ಕೆಎ 35, ಕೆಎ 19, ಯುಪಿಯಿಂದ ಗಾಡಿ ಏಕೆ ಬಂತು? – ಶಾಸಕ ಚನ್ನಬಸಪ್ಪ
ಶಿವಮೊಗ್ಗ: ಶಿವಮೊಗ್ಗದ ರಾಗಿಗುಡ್ಡದಲ್ಲಿನ ಘಟನೆ ಪೂರ್ವ ನಿಯೋಜಿತ ಗಲಭೆ, ಕಲ್ಲು ತೂರಾಟ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳಿದ್ದಾರೆ. ಗಲಭೆಯ ಮಾಹಿತಿ ಸಿಗುತ್ತಿದ್ದಂತೆ ರಾತ್ರಿಯೇ ಶಿವಮೊಗ್ಗ ಶಾಸಕ ಎಸ್.ಎನ್.ಚನ್ನಬಸಪ್ಪ ರಾಗಿಗುಡ್ಡಕ್ಕೆ ಭೇಟಿ ನೀಡಿ ಪರಿಸ್ಥಿತಿ ಕುರಿತು ಮಾಹಿತಿ ಪಡೆದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಕಳೆದ ಮೂರ್ನಾಲ್ಕು ದಿನದಿಂದ ಹೊರಗಿನಿಂದ ಅನೇಕ ವಾಹನಗಳು ಬಂದಿವೆ. ಕೆಎ 35, ಕೆಎ 19 ಮತ್ತು ಯುಪಿ ನೋಂದಣಿ ಇರುವ ವಾಹನಗಳು ಬಂದಿವೆ. ಈ ವಾಹನಗಳನ್ನು ಪತ್ತೆ ಹಚ್ಚಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಶಿವಮೊಗ್ಗದಲ್ಲಿ ಟಿಪ್ಪು ವಿಚಾರವು ಬಲಿಷ್ಠವಾಗಿ ನಿಂತುಕೊಂಡು ಬಿಟ್ಟಿದೆ. ಇದೇ ವಿಚಾರವೇ ಇಂದಿನ ಗಲಭೆಗೆ ಕಾರಣವಾಗಿರಬಹುದು. ಮೆರವಣಿಗೆ ಮುಂದೆ ಸಾಗಿದ ಮೇಲೆ ಒಂದು ಗುಂಪು ಹಿಂತಿರುಗಿದೆ. ಅವರು ತಮ್ಮ ಮನೆಗಳಿಗೆ ಮರಳುವ ಬದಲು ಬೇರೆ ಮನೆಗಳಿಗೆ ನುಗ್ಗಿದ್ದಾರೆ. ಶಾಂತಮ್ಮ ಎಂಬ ಮಹಿಳೆಯ ಕೂದಲು ಹಿಡಿದು ಎಳೆದಾಡಿದ್ದಾರೆ. ಬಿಡಿಸಲು ಹೋದ ಯುವಕನ ಮೇಲು ಹಲ್ಲೆ ನಡೆಸಿದ್ದಾರೆ. ವಿವಿಧ ಅಡ್ಡರಸ್ತೆಗಳಲ್ಲಿ ಆಟೋಗಳು, ವಾಹನಗಳು, ಮನೆಗಳ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಇದನ್ನೆಲ್ಲ ಗಮನಿಸಿದಾಗ ಘಟನೆ ಪೂರ್ವ ನಿಯೋಜಿತ ಎಂದು ಅನಿಸುತ್ತದೆ ಎಂದು ಶಾಸಕ ಚನ್ನಬಸಪ್ಪ ಆರೋಪಿಸಿದರು. ಘಟನೆಯಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿ, ಒಬ್ಬ ಮಹಿಳೆ, ಒಬ್ಬ ಯುವಕ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅನೇಕರು ಗಾಯಗೊಂಡಿದ್ದು ಇನ್ನು ಮನೆಯಲ್ಲೇ ಇದ್ದಾರೆ. ಅವರೆಲ್ಲ ಹೊರಗೆ ಬರಲು ಹೆದರುತ್ತಿದ್ದಾರೆ. ಶಾಂತಿನಗರವನ್ನು ಶಾಂತವಾಗಿರಿಸಲು ಪ್ರಯತ್ನಿಸುತ್ತೇವೆ. ಸಾರ್ವಜನಿಕರು ಯಾವುದೇ ಮಾಹಿತಿ ಇದ್ದರು ಪೊಲೀಸರು ಮತ್ತು ನನಗೆ ತಿಳಿಸಬೇಕು ಎಂದು ಶಾಸಕ ಚನ್ನಬಸಪ್ಪ ಮನವಿ ಮಾಡಿದರು. ರಕ್ಷಣೆ ಕೊಡುವವರು ಇದ್ದಾರೆ ಎಂದರೆ ಅವರು ಬಾಲ ಬಿಚ್ಚುವುದು ಸಹಜ. ರಕ್ಷಣೆ ಕೊಡುವ ಮಾನಸಿಕತೆಯಲ್ಲಿ ಸರ್ಕಾರದ ಮಾತು ಇದೆ. ಈ ಘಟನೆ ಹಿನ್ನೆಲೆ ಸರ್ಕಾರವು ಯೋಚನೆ ಮಾಡಬೇಕು. ಕ್ಷುಲಕ ಕಾರಣಕ್ಕೆ ಇಂತಹ ಕೃತ್ಯ ಎಸಗುವವರಿಗೆ ಶಕ್ತಿ ಕೊಡುವಂತಹ ಪ್ರಯತ್ನ ಆಗಬಾರದು ಎಂದು ಸರ್ಕಾರದ ವಿರುದ್ದ ಶಾಸಕ ಚನ್ನಬಸಪ್ಪ ಹರಿಹಾಯ್ದರು.