ಶಿವಮೊಗ್ಗ: ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ
ಶಿವಮೊಗ್ಗ: ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತನ ಮೇಲೆ ಹಲ್ಲೆ ನಡೆದಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ನಡೆದಿದೆ.
ಹಲ್ಲೆಗೊಳಗಾದ ಕಾರ್ಯಕರ್ತನನ್ನು ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಗೋಕುಲ್ ಕೃಷ್ಣನ್ ಎಂದು ಗುರುತಿಸಲಾಗಿದೆ. ಬಿಜೆಪಿ ಕಾರ್ಯಕರ್ತ ಗೋಕುಲ್ ಕೃಷ್ಣನ್ ಭದ್ರಾವತಿಯಲ್ಲಿ ನಡೆಯುತ್ತಿರುವ ಇಸ್ಪೀಟು, ಓಸಿ ದಂಧೆ ಸೇರಿದಂತೆ ಅಕ್ರಮ ದಂಧೆ ಕುರಿತು, ಅಲ್ಲದೇ ಈ ದಂಧೆಯಲ್ಲಿ ಶಾಸಕ ಬಿ.ಕೆ.ಸಂಗಮೇಶ್ವರ ಕೈವಾಡ ಇದೆ ಎಂಬುದಾಗಿ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದರು. ಇದರಿಂದ ರೊಚ್ಚಿಗೆದ್ದ ದುಷ್ಕರ್ಮಿಗಳು ಮನೆಯ ಮುಂದೆ ನಿಲ್ಲಿಸಿದ್ದ ಗೋಕುಲ್ ಕೃಷ್ಣನ್ ಕಾರನ್ನು ಜಖಂಗೊಳಿಸಿದ್ದರು.
ಭದ್ರಾವತಿಯ ಬಿ.ಹೆಚ್.ರಸ್ತೆಯಲ್ಲಿರುವ ಕಾಂಚನ ಹೋಟೆಲ್ ಗೆ ಊಟ ಪಾರ್ಸಲ್ ತರಲು ಗೋಕುಲ್ ತೆರಳಿದ್ದರು. ಈ ವೇಳೆ ಅಲ್ಲಿಗೆ ಬಂದ ಆರೇಳು ಮಂದಿ ದುಷ್ಕರ್ಮಿಗಳು ಏಕಾಏಕಿ ಗೋಕುಲ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.
ಹಲ್ಲೆಯಿಂದಾಗಿ ಗೋಕುಲ್ ಗೆ ಗಂಭೀರ ಗಾಯವಾಗಿದ್ದು, ಚಿಕಿತ್ಸೆಗೆ ಭದ್ರಾವತಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆಯನ್ನು ಖಂಡಿಸಿರುವ ಬಿಜೆಪಿ ಮುಖಂಡರು ಕಾಂಗ್ರೆಸ್ ಕಾರ್ಯಕರ್ತರೇ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಘಟನೆ ಕುರಿತು ಭದ್ರಾವತಿ ಓಲ್ಡ್ ಟೌನ್ ಠಾಣೆಯಲ್ಲಿ ದೂರು ದಾಖಲಾಗಿದೆ.