Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

‘ಸಂವಿಧಾನಬದ್ದ ಹಕ್ಕುಗಳನ್ನು ರಕ್ಷಿಸುವ ಪಣ ತೊಡಿ’-ನೂತನ ಡಿವೈಎಸ್ ಪಿಗಳಿಗೆ ಸಿಎಂ ಕರೆ

ಮೈಸೂರು:ಪ್ರತಿಯೊಬ್ಬರ ಸಂವಿಧಾನಬದ್ದ ಹಕ್ಕುಗಳನ್ನು ರಕ್ಷಿಸುವ ಪಣ ತೊಡಿ ಎಂದು ನೂತನ ಡಿವೈಎಸ್ ಪಿ ಮತ್ತು ಅಬಕಾರಿ ಡಿವೈಎಸ್ ಪಿ ಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

ಕರ್ನಾಟಕ ಪೊಲೀಸ್ ಅಕಾಡೆಮಿಯಲ್ಲಿ 37ನೇ ತಂಡದ ಪ್ರೊಬೆಷನರಿ ಪೊಲೀಸ್ ಉಪಾಧೀಕ್ಷಕರು ಮತ್ತು ಅಬಕಾರಿ ಉಪಾಧೀಕ್ಷಕರು ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು,

ಅಸಮಾನತೆ, ಜಾತಿ ತಾರತಮ್ಯ ಇರುವ ಸಮಾಜದಲ್ಲಿ ಅಶಕ್ತರಿಗೂ ನ್ಯಾಯ ಸಿಗುವಂತಾಗಬೇಕು. ಕೇವಲ ಬಲಾಡ್ಯರಿಗೆ ಮಾತ್ರ ನ್ಯಾಯ ಸಿಗುವಂತಾದರೆ ಇಷ್ಟೆಲ್ಲಾ ತರಬೇತಿ ಪಡೆದು ಪ್ರಯೋಜನ ಆಗುವುದಿಲ್ಲ. ಜಾತಿ ದೌರ್ಜನ್ಯ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ ಅತ್ಯಂತ ಕಡಿಮೆ ಇರುವುದನ್ನು ಪ್ರಸ್ತಾಪಿಸಿ ಇದು ಸರಿಯಾಗಬೇಕಿದೆ ಎಂದರು.

ಸುಳ್ಳು ಮತ್ತು ದ್ವೇಷದ ಮೂಲಕ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವವರ ವಿರುದ್ಧ ಅತ್ಯಂತ ನಿಷ್ಠುರವಾಗಿ ವರ್ತಿಸಿ ಪ್ರತಿಯೊಬ್ಬರ ಸಂವಿಧಾನ ಬದ್ದ ಹಕ್ಕುಗಳನ್ನು ರಕ್ಷಿಸುವ ಸವಾಲು ನಿಮ್ಮ ಮೇಲಿದೆ. ದ್ವೇಷ ಕಾರುವವರಿಗೆ ಎಷ್ಟೇ ರಾಜಕೀಯ ಶಕ್ತಿ ಇದ್ದರೂ ಅವರನ್ನು ಮಟ್ಟ ಹಾಕದಿದ್ದರೆ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯವಿಲ್ಲ.

ಶಾಂತಿ-ಸುವ್ಯವಸ್ಥೆ ಇಲ್ಲದ ಸಮಾಜ, ನಾಡು, ದೇಶ ಅಭಿವೃದ್ಧಿ ಹೊಂದಲು, ಪ್ರಗತಿ ಪಥದಲ್ಲಿ ಮುಂದೆ ಸಾಗಲು ಸಾಧ್ಯವೇ ಇಲ್ಲ ಎನ್ನುವುದನ್ನು ನೆನಪಿನಲ್ಲಿಟ್ಟುಕೊಂಡು ಕರ್ತವ್ಯ ನಿರ್ವಹಿಸಿ ಎಂದು ಕರೆ ನೀಡಿದರು
ಪೊಲೀಸರು ಅನೇಕ ಸಂದರ್ಭಗಳಲ್ಲಿ ಕ್ಲಿಷ್ಟ ಪರಿಸ್ಥಿತಿಗಳಲ್ಲಿ ಕೆಲಸ ಮಾಡಬೇಕಾಗುತ್ತದೆ. ಎಂಥಾದ್ದೇ ಸಂದರ್ಭದಲ್ಲೂ ತಾಳ್ಮೆ ಕಳೆದುಕೊಳ್ಳದೆ ಕರ್ತವ್ಯ ನಿರ್ವಹಿಸಬೇಕು ಎಂದರು.

ಗೃಹ ಸಚಿವ ಜಿ.ಪರಮೇಶ್ವರ್ ಅವರು ಅಧ್ಯಕ್ಷತೆ ವಹಿಸಿದ್ದರು.