ಸಂಸತ್ ಮುಂಗಾರು ಅಧಿವೇಶನ ಇಂದಿನಿಂದ ಆರಂಭ – ಕೇಂದ್ರವನ್ನು ತರಾಟೆಗೆ ತೆಗೆದುಕೊಳ್ಳಲು “ಇಂಡಿಯಾ” ವಿಪಕ್ಷಗಳ ಒಕ್ಕೂಟ ಸಜ್ಜು
ನವದೆಹಲಿ: ಪ್ರಸಕ್ತ ಮುಂಗಾರು ಅಧಿವೇಶನ ಇಂದಿನಿಂದ ಆರಂಭವಾಗಿದ್ದು, ಆಡಳಿತರೂಢ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಳ್ಳಲು ವಿಪಕ್ಷಗಳ ಒಕ್ಕೂಟ “ಇಂಡಿಯಾ” ಸರ್ವರೀತಿಯಲ್ಲೂ ಸನ್ನದ್ಧಗೊಂಡಂತಿದೆ. ಮುಖ್ಯವಾಗಿ ದೆಹಲಿ ಸುಗ್ರೀವಾಜ್ಞೆ, ಮಣಿಪುರ ಹಿಂಸಾಚಾರ, ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ ಸೇರಿದಂತೆ ಮೊದಲಾದ ವಿಷಯಗಳನ್ನು ಮುಂದೆ ಮಾಡಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯತೆ ಇದೆ. ಇನ್ನು, ವಿರೋಧ ಪಕ್ಷಗಳಿಗೆ ಟಾಂಗ್ ಕೊಡಲು ಮೋದಿ ಪಡೆಯೂ ಸಿದ್ಧವಾಗಿದೆ ಎಂದು ಹೇಳಲಾಗುತ್ತಿದೆ. ಇಂದಿನಿಂದ ಆಗಸ್ಟ್ 11ರ ವರೆಗೆ ನಡೆಯಲಿರುವ ಸಂಸತ್ ಅಧಿವೇಶನದಲ್ಲಿ 31 ವಿಧೇಯಕಗಳು ಮಂಡನೆಯಾಗಲಿವೆ ಎಂದು ದೆಹಲಿ ಮೂಲಗಳು ತಿಳಿಸಿವೆ.