Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಸದನದಲ್ಲಿ ಮಹಿಳಾ ಮೀಸಲಾತಿ ಮಸೂದೆ ವಿರೋಧಿಸಿದ್ದು ಕೇವಲ ಅವರಿಬ್ಬರು..! – ಯಾರವರು? ಅವರು ನೀಡಿದ ಕಾರಣವೇನು?

ಸಂಸತ್ ನಲ್ಲಿ ಮಹಿಳಾ ಮೀಸಲಾತಿ ಮಸೂದೆ ಬಗ್ಗೆ ಹಲವಾರು ವರ್ಷಗಳಿಂದಲೇ ಚರ್ಚೆ ನಡೆಯುತ್ತಿದೆ. ದೇಶಾದ್ಯಂತ ಜನರು ಇದರ ಮಂಡನೆಗೆ ಕಾತರದಿಂದ ಕಾಯುತ್ತಿದ್ದರು. ಎಲ್ಲರೂ ಇದರ ಪರವಾಗಿಯೇ ಇದ್ದರೂ ಕೆಲವರು ಇನ್ನೂ ಇದನ್ನು ಒಪ್ಪಿಕೊಳ್ಳಲು ಸಾಧ್ಯವಾಗಿಲ್ಲ ಎನ್ನುವುದಕ್ಕೆ ಲೋಕಸಭೆ ಸಾಕ್ಷಿಯಾಗಿದೆ.

ಲೋಕಸಭೆ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಸೂದೆಗೆ ವಿರುದ್ಧವಾಗಿ ಎಐಎಂಐಎಂ ಪಕ್ಷದ ಅಧ್ಯಕ್ಷ ಅಸಾದುದ್ದೀನ್​ ಓವೈಸಿ, ಸಂಸದ ಇಮ್ತಿಯಾಜ್ ಜಲೀಲ್ ಮತ ಹಾಕಿರುವುದು ಇದಕ್ಕೆ ಸ್ಪಷ್ಟ ಉದಾಹರಣೆ.

ಸಂಸತ್ ನಲ್ಲಿ ಬುಧವಾರ ಮಂಡನೆಯಾದ ನಾರಿ ಶಕ್ತಿ ವಂದನ್ ಅಧಿನಿಯಮ್ ದ ಪರವಾಗಿ 454 ಮತ ಹಾಕಿದ್ದು, ಎರಡು ಮತ ಮಾತ್ರ ವಿರುದ್ಧವಾಗಿ ಚಲಾಯಿಸಲಾಗಿತ್ತು.

ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಪಾಸ್ ಮಾಡಲಾಗಿದ್ದು ದೇಶವೇ ಸಂಭ್ರಮ ಪಟ್ಟಿದೆ. ಮಹಿಳೆಯರು ಹರ್ಷ ವ್ಯಕ್ತಪಡಿಸುತ್ತಿದ್ದಾರೆ. ಮತ ಹಾಕಿದ ಎಲ್ಲರಿಗೂ ಪಕ್ಷಾತೀತವಾಗಿ ಪ್ರಧಾನಿ ಮೋದಿ ಕೃತಜ್ಞತೆ ಸಲ್ಲಿಸಿದ್ದಾರೆ.

ಎಐಎಂಐಎಂ ಪಕ್ಷದ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಅವರು ತಾವು ಯಾಕೆ ವಿರುದ್ಧವಾಗಿ ಮತ ಚಲಾಯಿಸಿದೆ ಎಂಬುದನ್ನು ಹೇಳಿದ್ದಾರೆ. ಒಬಿಸಿ ಮತ್ತು ಮುಸ್ಲಿಂ ಮಹಿಳೆಯರಿಗೆ ನಾರಿ ಶಕ್ತಿ ವಂದನ್ ಅಧಿನಿಯಮ್ ಮಸೂದೆಯಲ್ಲಿ ಯಾವುದೇ ಪ್ರಾತಿನಿಧ್ಯ ನೀಡಿಲ್ಲದ ಕಾರಣ ವಿರುದ್ಧವಾಗಿ ವೋಟ್ ಮಾಡಬೇಕಾಯಿತು ಎಂದಿದ್ದಾರೆ.

ಮಹಿಳಾ ಮೀಸಲಾತಿ ಮಸೂದೆ ಕೇವಲ ಮೇಲ್ಜಾತಿ ಮಹಿಳೆಯರಿಗೆ ಮಾತ್ರ ಅನ್ವಯವಾಗುತ್ತಿದೆ. ಒಬಿಸಿ, ಮುಸ್ಲಿಮರಿಗೆ ಉಪಯೋಗವಿಲ್ಲ. ದೇಶದಲ್ಲಿ ಒಬಿಸಿ ಜನಸಂಖ್ಯೆ ಶೇ. 50 ಕ್ಕಿಂತ ಹೆಚ್ಚಾಗಿದ್ದರೆ, ಲೋಕಸಭೆಯಲ್ಲಿ ಅವರ ಪ್ರಾತಿನಿಧ್ಯ ಕೇವಲ ಶೇ. 22 ಇದೆ. ಮುಸ್ಲಿಂ ಜನಸಂಖ್ಯೆ ಶೇ. 7 ರಷ್ಟಿದ್ದು ಇವರ ಪ್ರಾತಿನಿಧ್ಯ ಕೇವಲ 0.7 ಇದೆ. ಹೀಗಾಗಿ ಅವರಿಗೆ ಏಕೆ ಪ್ರಾತಿನಿಧ್ಯ ನೀಡುತ್ತಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.

ಮೇಲ್ಜಾತಿ ಮಹಿಳೆಯರ ಪ್ರಾತಿನಿಧ್ಯವನ್ನು ಹೆಚ್ಚಿಸಲು ಪ್ರಧಾನಿ ಮೋದಿ ನೇತೃತ್ವದ ಸರಕಾರ ಈ ಮಸೂದೆ ಪಾಸ್ ಮಾಡಿದೆ. ಮುಸ್ಲಿಂ ಮತ್ತು ಒಬಿಸಿ ಸಮುದಾಯದ ಮಹಿಳೆಯರಿಗೆ ನೀಡಬೇಕಾದ ಪಾಲನ್ನು ಸರ್ಕಾರ ನೀಡುತ್ತಿಲ್ಲ ಎಂದು ಆರೋಪಿಸಿದರು.