ಸರ್ಕಾರಿ ಆಸ್ತಿ ರಕ್ಷಣೆಗೆ ಪ್ರತ್ಯೇಕ ವಿಭಾಗ ರಚನೆ: ಡಿಸಿಎಂ ಡಿ.ಕೆ. ಶಿವಕುಮಾರ್
ಬೆಳಗಾವಿ: “ಬೆಂಗಳೂರಿನ ರಸ್ತೆ ಹಾಗೂ ಚರಂಡಿಗಳನ್ನು ಅಭಿವೃದ್ಧಿಪಡಿಸಲು ವೈಟ್ ಟ್ಯಾಪಿಂಗ್ ಗೆ ಆದ್ಯತೆ ನೀಡಲಾಗುತ್ತಿದ್ದು, ಈ ಬಗ್ಗೆ ಸದ್ಯದಲ್ಲೇ ಬೆಂಗಳೂರಿನ ಶಾಸಕರ ಸಭೆ ನಡೆಸಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯರಾದ ಹೆಚ್. ಎಸ್ ಗೋಪಿನಾಥ್ ಅವರ ಪ್ರಶ್ನೆಗೆ ಅವರು ಉತ್ತರಿಸಿದರು.
“ಬೆಂಗಳೂರಿನಲ್ಲಿ 1.14 ಕೋಟಿ ವಾಹನಗಳು ಇವೆ. ಬೆಂಗಳೂರಿನ ಜನಸಂಖ್ಯೆಯಷ್ಟೇ ವಾಹನಗಳ ಸಂಖ್ಯೆ ಕೂಡ ಇದೆ. ನಗರದಲ್ಲಿ ನಿತ್ಯ ಸರಾಸರಿ 1300 ದ್ವಿಚಕ್ರ ವಾಹನಗಳು ಹಾಗೂ 490 ಕಾರುಗಳು ನೊಂದಣಿಯಾಗುತ್ತಿವೆ.
ವಾಹನಗಳ ಒತ್ತಡದಿಂದ ರಸ್ತೆಗಳು ಹಾಳಾಗುತ್ತಿದ್ದು, ರಸ್ತೆಗುಂಡಿ ಮುಚ್ಚುವುದೇ ದೊಡ್ಡ ಕೆಲಸವಾಗಿದೆ. ಹೀಗಾಗಿ ರಸ್ತೆಗುಂಡಿ ಮುಚ್ಚುವ ಕೆಲಸವನ್ನು ವಿಕೇಂದ್ರೀಕರಣ ಮಾಡಲಾಗಿದೆ. ಸಾರ್ವಜನಿಕರು ಅಥವಾ ಪೊಲೀಸ್ ಸಿಬ್ಬಂದಿ ಫೋಟೋ ತೆಗೆದು ಕಳುಹಿಸುವ ಗುಂಡಿಗಳನ್ನು ಪಾಲಿಕೆ ಅಧಿಕಾರಿಗಳು ಮುಚ್ಚಿಸುತ್ತಿದ್ದಾರೆ.
ವೈಟ್ ಟಾಪಿಂಗ್ ಗೆ 1000 ಕೋಟಿ ಅನುದಾನವಿದ್ದು, ಮುಖ್ಯರಸ್ತೆಗಳಲ್ಲದೆ ಬೇರೆ ರಸ್ತೆಗಳನ್ನು ಮಾಡಬೇಕೆಂಬ ಬೇಡಿಕೆ ಇದೆ. ಬೆಂಗಳೂರಿನಲ್ಲಿ ಕೇಬಲ್ ಗಳ ಹಾವಳಿ ಹೆಚ್ಚಾಗಿದೆ. ಇದಕ್ಕಾಗಿ ರಸ್ತೆ ಅಗೆಯಲಾಗುತ್ತಿದೆ. ಹೀಗಾಗಿ ಯೋಜಿತ ರೂಪದಲ್ಲಿ ವೈಟ್ ಟ್ಯಾಪಿಂಗ್ ಕೆಲಸ ಮಾಡಬೇಕಿದೆ.
25 ರಿಂದ 40 ವರ್ಷಗಳ ಕಾಲ ರಸ್ತೆಗಳು ಬಾಳಿಕೆ ಬರುವ ಹಿನ್ನೆಲೆಯಲ್ಲಿ ವೈಟ್ ಟಾಪಿಂಗ್ ಗೆ ಆದ್ಯತೆ ನೀಡಲಾಗಿದೆ. ಎಲ್ಲೆಲ್ಲಿಇದರ ಅಗತ್ಯವಿದೆ ಎಂಬುದರ ಚರ್ಚೆಗೆ ಸದ್ಯದಲ್ಲೇ ಬೆಂಗಳೂರಿನ ಶಾಸಕರ ಸಭೆ ಕರೆಯಲಿದ್ದೇನೆ. ಸರ್ಕಾರ ಎಷ್ಟೇ ಅನುದಾನ ನೀಡಿದರೂ ಪಾಲಿಕೆ ಹೆಚ್ಚಿನ ಆದಾಯ ಗಳಿಸುವ ಅಗತ್ಯವಿದೆ. ಇದಕ್ಕಾಗಿ ತೆರಿಗೆ ಹೆಚ್ಚಳಕ್ಕೆ ಮುಂದಾಗಿದ್ದೇವೆ. ಆ ಮೂಲಕ ಪಾಲಿಕೆಗೆ ಆರ್ಥಿಕ ಶಕ್ತಿ ತುಂಬ ಕೆಲಸ ಮಾಡುತಿದ್ದೇವೆ. ಈ ಬಗ್ಗೆ ನಿಮ್ಮ ಬಳಿ ಸಲಹೆಗಳಿದ್ದರೆ ನೀಡಿ. ಬೆಂಗಳೂರಿನ ಗೌರವ, ಸ್ವಾಭಿಮಾನ ಉಳಿಸಲು ಒಟ್ಟಾಗಿ ಕೆಲಸ ಮಾಡೋಣ.”
ಅಪರಾಧ ತಡೆಗೆ ಗೃಹ ಇಲಾಖೆ ಸಹಯೋಗದಲ್ಲಿ ಕ್ರಮ
ಬೆಂಗಳೂರಿನ ಸ್ವಚ್ಛತೆ, ಮೂಲಭೂತ ಸೌಕರ್ಯ ಅಭಿವೃದ್ಧಿ, ಅಪರಾಧ ತಡೆ ಹಾಗೂ ಜಾಗತಿಕ ಮಟ್ಟದಲ್ಲಿ ಬೆಂಗಳೂರಿನ ಘನತೆ ಉಳಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ಭಾರತಿ ಶೆಟ್ಟಿ ಅವರು ಕೇಳಿದ ಪ್ರಶ್ನೆಗೆ, “ಭಾರತಿ ಶೆಟ್ಟಿ ಅವರು ಮೂಲತಃ ಮಂಗಳೂರಿನವರಾದರೂ ಬೆಂಗಳೂರಿನ ಬಗ್ಗೆ ಬಹಳ ಆಸಕ್ತಿ ಹೊಂದಿದ್ದಾರೆ. ಸ್ವಚ್ಛತೆ ವಿಚಾರದಲ್ಲಿ ಮಂಗಳೂರು, ಬೆಳಗಾವಿ ಬೆಂಗಳೂರಿಗಿಂತ ಉತ್ತಮವಾಗಿವೆ. ಜಯನಗರ, ಚಾಮರಾಜಪೇಟೆ, ಮಲ್ಲೇಶ್ವರಂ ಪ್ರದೇಶಗಳ ಹೊರತಾಗಿ ಬೆಂಗಳೂರು ಯೋಜಿತ ನಗರವಲ್ಲ.
ನಾನು ಹಿಂದೆ ನಗರಾಭಿವೃದ್ಧಿ ಸಚಿವನಾಗಿದ್ದಾಗ ಬೆಂಗಳೂರಿನ ಜನಸಂಖ್ಯೆ 60 ಲಕ್ಷ ಇತ್ತು. ಈಗ 1.40 ಕೋಟಿ ಆಗಿದೆ. ಇಷ್ಟು ದೊಡ್ಡ ಜನಸಂಖ್ಯೆಗೆ ಕುಡಿಯುವ ನೀರು ಪೂರೈಕೆ. ಘನತ್ಯಾಜ್ಯ ವಿಲೇವಾರಿ ದೊಡ್ಡ ಸವಾಲು. ಕಸ ತೆಗೆಯುವುದೇ ದೊಡ್ಡ ಸಮಸ್ಯೆ, ದಂಧೆ ಆಗಿದೆ. ಕಸ ವಿಲೇವಾರಿಗೆ ಬೇರೆ ರಾಜ್ಯಗಳಲ್ಲಿ ಅಳವಡಿಸಿರುವ ವ್ಯವಸ್ಥೆಗಳನ್ನು ಅಧ್ಯಯನ ಮಾಡಲಾಗುತ್ತಿದೆ. ದೆಹಲಿ, ಹೈದರಾಬಾದ್ ನಲ್ಲಿ ಅಧ್ಯಯನ ಮಾಡಲಾಗಿದೆ. ಇಂಧೋರ್ ಗೆ ತೆರಳಬೇಕಿದೆ. ಈ ಬಗ್ಗೆ ಎಲ್ಲಾ ಪಕ್ಷದ ನಾಯಕರು ಹಾಗೂ ಸಾರ್ವಜನಿಕರ ಸಲಹೆ ಪಡೆದಿದ್ದೇನೆ.
ಬ್ರಾಂಡ್ ಬೆಂಗಳೂರು ಪರಿಕಲ್ಪನೆಯಲ್ಲಿ ಸಾರ್ವಜನಿಕರಿಂದ 70 ಸಾವಿರ ಸಲಹೆ ಸಂಗ್ರಹವಾಗಿದೆ. ಆರೋಗ್ಯ, ಕುಡಿಯುವ ನೀರು, ತಂತ್ರಜ್ಞಾನ, ಪರಿಸರ ಕ್ಷೇತ್ರಗಳಾಗಿ ವಿಭಜನೆ ಮಾಡಿ ಬೆಂಗಳೂರಿನ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುತ್ತಿದೆ. ಬೆಂಗಳೂರು ಎಲ್ಲರ ನೆಚ್ಚಿನ ನಗರ. ಬೆಂಗಳೂರಿನ ಆದಾಯ ಹಳ್ಳಿಗಳ ಅಭಿವೃದ್ಧಿಗೆ ನೆರವಾಗುತ್ತಿದೆ. ದೇಶದ ರಫ್ತ್ತು ಆದಾಯದಲ್ಲಿ 39 % ರಷ್ಟು ಬೆಂಗಳೂರಿನಿಂದ ಸಂಗ್ರಹವಾಗುತ್ತಿದೆ. ಹೀಗಾಗಿ ಬೆಂಗಳೂರಿಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ.
ಸಾರ್ವಜನಿಕರ ಸಲಹೆಗಳನ್ನು ಪರಿಶೀಲಿಸಲು ಕೆಲವು ಸಂಸ್ಥೆಗಳಿಗೆ ಜವಾಬ್ದಾರಿ ನೀಡಲಾಗಿದೆ. ನಾವು ಹೆಬ್ಬಾಳ ಮೇಲ್ಸೇತುವೆ ನಿರ್ಮಾಣಕ್ಕೆ ಅನುಮೋದನೆ ನೀಡಿದಾಗ ದೇವನಹಳ್ಳಿಯಲ್ಲಿ ವಿಮಾನ ನಿಲ್ದಾಣ ಇರಲಿಲ್ಲ. ಈಗ ವಿಮಾನ ನಿಲ್ದಾಣವಾಗಿದ್ದು, ವಾಹನ ದಟ್ಟಣೆ ಹೆಚ್ಚಾಗಿದೆ. ಬೆಂಗಳೂರು ಉತ್ತರ ಭಾಗ ಬೆಳೆಯುತ್ತಿದೆ.
ಬೆಂಗಳೂರಿನ ಸಂಚಾರ ಸಮಸ್ಯೆ ಬಗೆಹರಿಸಲು 9 ಸಂಸ್ಥೆಗಳ ಜೊತೆ ಚರ್ಚೆ ಮಾಡಲಾಗಿದೆ. ಈ ವಿಚಾರವಾಗಿ ನಿನ್ನೆ ಕೂಡ ಸಭೆ ಮಾಡಿದ್ದೇನೆ. ಸಂಚಾರ ಹಾಗೂ ಅಪರಾಧ ತಡೆಗಟ್ಟಲು ಆರ್ಟಿಫಿಷಲ್ ಇಂಟಲಿಜೆನ್ಸ್ ನಂತಹ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಗೃಹ ಸಚಿವಾಲಯದ ಜತೆ ಸೇರಿ ಯೋಜನೆ ರೂಪಿಸುತ್ತಿದ್ದೇವೆ.
ಐದು ಪ್ರಮುಖ ರಸ್ತೆಗಳಿಂದ ನಗರದ ಒಳಗೆ ಸಂಚಾರಿ ದಟ್ಟಣೆ ಹೆಚ್ಚಾಗಿದೆ. ಇದಕ್ಕೆ ದೀರ್ಘಾವಧಿಯ ಯೋಜನೆ ಬೇಕಾಗಿದೆ. ಬೆಂಗಳೂರನ್ನು ಪ್ರವಾಸಿ ತಾಣ ಮಾಡಲು ಯೋಜನೆ ರೂಪಿಸಲಾಗಿಲ್ಲ. ವಿದೇಶಿ ಪ್ರವಾಸಿಗರಿಗೆ ವಿಧಾನಸೌಧ ಹಾಗೂ ಹೈಕೋರ್ಟ್ ಬಿಟ್ಟರೆ ಬೇರೆ ಆಯ್ಕೆಗಳೇ ಇಲ್ಲ.
ಸರ್ಕಾರಿ ಆಸ್ತಿ ರಕ್ಷಣೆಗೆ ಪ್ರತ್ಯೇಕ ವಿಭಾಗ ರಚನೆ
ಬಿಡಿಎ ಸ್ವತ್ತು ವ್ಯಾಜ್ಯಗಳಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ಖಾಸಗಿ ವ್ಯಕ್ತಿಗಳ ಪರ ತೀರ್ಪು ಬರುತ್ತಿರುವುದರ ಬಗ್ಗೆ ಮರೀತಿಬ್ಬೆಗೌಡರ ಪ್ರಶ್ನೆಗೆ ಉತ್ತರಿಸಿ, “ನಾನು ಮರಿತಿಬ್ಬೆಗೌಡರ ವಾದ ಒಪ್ಪುತ್ತೇನೆ. ಅಲ್ಲಿ ದೊಡ್ಡ ಮಾಫಿಯಾ ಇದೆ. ಯಾವುದೇ ಹೊಣೆಗಾರಿಕೆ ಇಲ್ಲವಾಗಿದೆ. ಈ ಹಿಂದಿನ ಸರ್ಕಾರಗಳು ಅಡ್ವೊಕೇಟ್ ಗಳನ್ನು ನೇಮಕ ಮಾಡಿದರೂ ಶೇ.90 ರಷ್ಟು ತೀರ್ಪು ಖಾಸಗಿಯವರ ಪರವಾಗಿವೆ. ಇತ್ತೀಚೆಗೆ ಸಚಿವ ಹೆಚ್.ಕೆ. ಪಾಟೀಲರು ರಾಜ್ಯದ ಅಡ್ವೊಕೇಟ್ ಗಳ ಜತೆ ಚರ್ಚೆ ಮಾಡಿದ್ದಾರೆ. ಬಿಡಿಎ ಹಾಗೂ ಪಾಲಿಕೆ ವಿಚಾರದಲ್ಲಿ ಮುಂದಿನ ಶನಿವಾರ ಅಡ್ವೊಕೇಟ್ ಗಳ ಸಭೆ ನಿಗದಿ ಮಾಡಿದ್ದು, ಯಾರು ಎಷ್ಟು ಕೇಸ್ ವಾದ ಮಾಡಿದ್ದಾರೆ, ಎಷ್ಟು ಕೇಸ್ ಗೆದ್ದಿದ್ದಾರೆ, ಮುಂದೆ ಅವರ ಕಾರ್ಯಯೋಜನೆ ಏನು ಎಂದು ಪರಿಶೀಲನೆ ಮಾಡಲಾಗುವುದು. ನಾವು ಏಕಾಏಕಿ ಒಂದೇ ದಿನ ತೆಗೆದುಹಾಕುವುದಿಲ್ಲ. ಸದಸ್ಯರು ಹೇಳಿದ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಬಿಡಿಎ ಆಸ್ತಿ ಕುರಿತ ಪ್ರಕರಣಗಳ ಪರಿಶೀಲನೆಗೆ ಪ್ರತ್ಯೇಕ ವಿಭಾಗ ರೂಪಿಸಲು ಅಡ್ವೊಕೇಟ್ ಜನರಲ್ ಅವರಿಗೆ ಸೂಚನೆ ನೀಡಲಾಗಿದೆ. ಸರ್ಕಾರಿ ಅಡ್ವೊಕೇಟ್ ಗಳಿಗೆ ಹೊಣೆಗರಿಕೆ ನಿಗದಿ ಮಾಡುತ್ತೇವೆ” ಎಂದು ತಿಳಿಸಿದರು.