ಸಾಮರಸ್ಯ ಇನ್ನೂ ಜೀವಂತ:ವನ್ಯ ಜೀವಿಗಳ ದಾಳಿ ಭಯ, ಶಬರಿಮಲೆ ಯಾತ್ರಿಕರಿಗೆ ಆಶ್ರಯ ನೀಡಿದ ಮಸೀದಿ..!
ಮಡಿಕೇರಿ : ನಾಡಿನಲ್ಲಿ ಅಲ್ಲಲ್ಲಿ ಕೋಮುಸಂಘರ್ಷಗಳು ನಡೆಯತ್ತಲೇ ಇದ್ರೂ ಕೊಡಗಿನ ಮಸಿದಿಯೊಂದು ಶಬರಿಮಲೆಗೆ ತೆರಳಿದ್ದ ಯಾತ್ರಿಕರಿಗೆ ಆಶ್ರಯ ನೀಡುವ ಮೂಲಕ ಸಾಮರಸ್ಯ ಇನ್ನೂ ಜೀವಂತ ಇದೆ ಎಂಬುವುದನ್ನು ತೋರಿಸಿಕೊಟ್ಟಿದೆ.
ಕೇರಳದ ಶಬರಿಮಲೆಗೆ ತೆರಳುತ್ತಿದ್ದ ಉತ್ತರ ಕರ್ನಾಟಕದ ಆರು ಮಂದಿ ಹಿಂದೂ ಯಾತ್ರಾರ್ಥಿಗಳ ತಂಡಕ್ಕೆ ರಾತ್ರಿ ವೇಳೆ ವನ್ಯಜೀವಿ ದಾಳಿಯ ಭೀತಿ ಎದುರಾದ ಕಾರಣ ತಮ್ಮಲ್ಲಿ ತಂಗಲು ಕೊಡಗಿನ ಮಸೀದಿ ಆವರಣದಲ್ಲಿ ತಂಗಲು ಅವಕಾಶ ಕಲ್ಪಿಸಿಕೊಟ್ಟ ವಿದ್ಯಮಾನ ಸಂಭವಿಸಿದೆ. ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಎಡತಾರ ಗ್ರಾಮದ ಲಿವಾವುಲ್ ಹುದಾ ಜುಮ್ಮಾ ಮಸೀದಿ ಮತ್ತು ಮದರಸಾದ ಆಡಳಿತ ಮಂಡಳಿ ಮತ್ತು ಧಾರ್ಮಿಕ ಬೋಧಕರು ಹಿಂದೂ ಯಾತ್ರಾರ್ಥಿಗಳಿಗೆ ವಸತಿ ಕಲ್ಪಿಸಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.ಬೆಳಗಾವಿ ಜಿಲ್ಲೆಯ ಗೋಕಾಕ ಸಮೀಪದ ಗ್ರಾಮದಿಂದ ಬಂದಿದ್ದ ಹಿಂದೂ ಯಾತ್ರಾರ್ಥಿಗಳು ಬೈಕ್ನಲ್ಲಿ ಶಬರಿಮಲೆಗೆ ಯಾತ್ರೆ ಕೈಗೊಂಡಿದ್ದಾರೆ. ದಟ್ಟ ಅರಣ್ಯದ ನಡುವೆ ಇರುವ ಎಡತ್ತರ ಗ್ರಾಮವನ್ನು ತಲುಪಿದ ಅವರು, ವಿಶೇಷವಾಗಿ ಆನೆಗಳಿಂದ ವನ್ಯಜೀವಿಗಳ ದಾಳಿಯ ಸಂಭವನೀಯ ಅಪಾಯದ ಬಗ್ಗೆ ತಿಳಿದುಕೊಂಡರು.ಮಸೀದಿಯನ್ನು ಗಮನಿಸಿದ ಅವರು, ಆಡಳಿತ ಮಂಡಳಿಗೆ ತಂಗಲು ಅವಕಾಶ ನೀಡುವಂತೆ ಮನವಿ ಮಾಡಿದರು. ಮಸೀದಿಯ ಅಧ್ಯಕ್ಷ ಉಸ್ಮಾನ್ ಮತ್ತು ಪದಾಧಿಕಾರಿ ಖತೀಬ್ ಕ್ವಾಮರುದ್ದೀನ್ ಅನ್ವರಿ ಸಕಾರಾತ್ಮಕವಾಗಿ ಸ್ಪಂದಿಸಿ ಮಸೀದಿಯಲ್ಲಿ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಿದರು. ಇಷ್ಟು ಮಾತ್ರವಲ್ಲ ಯಾತ್ರಾರ್ಥಿಗಳಾದ ಕಮಲೇಶ್ ಗೌರಿ, ಭೀಮಪ್ಪ ಸನದಿ, ಶಿವಾನಂದ ನಾವೇದಿ, ಗಂಗಾಧರ ಬಡಿದೆ, ಸಿದ್ದರೋಡ್ ಸನದಿ ಅವರಿಗೆ ಮಸೀದಿ ಆವರಣದಲ್ಲಿ ಪೂಜೆ ಸಲ್ಲಿಸಲೂ ಅನುಮತಿ ನೀಡಲಾಗಿತ್ತು. ಮಸೀದಿಯಲ್ಲಿ ಬೆಳಗಿನ ಪ್ರಾರ್ಥನೆ ಸಲ್ಲಿಸಿದ ಯಾತ್ರಾರ್ಥಿಗಳು ಮಸೀದಿ ಆಡಳಿತ ಮಂಡಳಿಗೆ ಕೃತಜ್ಞತೆ ಸಲ್ಲಿಸಿದ ಬಳಿಕ ಶಬರಿಮಲೆಗೆ ತೆರಳಿದರು. ಎಡತರಾದಲ್ಲಿರುವ ನಮ್ಮ ಮಸೀದಿಯಲ್ಲಿ ಭಕ್ತರಿಗೆ ಅವರ ಧರ್ಮವನ್ನು ಲೆಕ್ಕಿಸದೆ ಸೌಲಭ್ಯಗಳನ್ನು ಒದಗಿಸಲು ನಾವು ಸಿದ್ಧರಿದ್ದೇವೆ. ಈ ಪ್ರದೇಶವು ರಾತ್ರಿ ಸಮಯದಲ್ಲಿ ಆನೆಗಳ ದಾಳಿಗೆ ಗುರಿಯಾಗುತ್ತದೆ. ಈ ರಸ್ತೆಯ ಮೂಲಕ ಯಾರು ಹಾದು ಹೋಗುತ್ತಾರೋ ಅವರು ಮಸೀದಿಯಲ್ಲೇ ಉಳಿಯಬಹುದು ಮತ್ತು ನಾವು ಎಲ್ಲಾ ಸೌಲಭ್ಯಗಳನ್ನು ಒದಗಿಸುತ್ತೇವೆ. ಎಲ್ಲಾ ದೇವರುಗಳು ಒಂದೇ ಎಂದು ಉಸ್ಮಾನ್ ಪ್ರತಿಕ್ರೀಯಿಸಿದ್ದಾರೆ.