Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಸಿಎಂ ಸಿದ್ದರಾಮಯ್ಯರನ್ನು ಅವಹೇಳನಕಾರಿಯಾಗಿ ಚಿತ್ರೀಕರಿಸಿದ ಯುವಕ- ಪ್ರಕರಣ ದಾಖಲು

ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅವಹೇಳನಕಾರಿಯಾಗಿ ಚಿತ್ರೀಕರಿಸಿ ವಾಟ್ಸಪ್ ಗ್ರೂಪ್‌ನಲ್ಲಿ ಹರಿಬಿಟ್ಟ ಯುವಕನ ವಿರುದ್ಧ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ನಂದಾವರ ಅವರು ದೂರು ನೀಡಿದ್ದು, ಸಿದ್ದರಾಮಯ್ಯ ಅವರನ್ನು ಹಸಿರು ಕೋಟು ಹಾಗೂ ತಲೆಗೆ ಟೋಪಿ ಧರಿಸಿ ಹಂದಿಯ ಮೇಲೆ ಕುಳಿತಿರುವಂತೆ ಚಿತ್ರೀಕರಿಸಿ “ಮಸೀದಿ ಕಡೆ ಸಿದ್ದು ಸವಾರಿ” ಎಂಬ ತಲೆ ಬರಹವಿರುವ ಫೋಟೋವನ್ನು ಜೈ ಕರ್ನಾಟಕ ಎಂಬ ವಾಟ್ಸಪ್ ಗ್ರೂಪ್ ನಲ್ಲಿ ಸೋಮನಗೌಡ ಎಂಬಾತ ಹರಿಯಬಿಟ್ಟಿದ್ದು, ಇದು ಮುಖ್ಯಮಂತ್ರಿ ಅವರ ಘನತೆಗೆ ಧಕ್ಕೆ ಉಂಟು ಮಾಡುವುದಲ್ಲದೆ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುತ್ತದೆ. ಆದ್ದರಿಂದ ಈತನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಆಗ್ರಹಿಸಿದ್ದಾರೆ. ದೂರು ಸ್ವೀಕರಿಸಿದ ಬಂಟ್ವಾಳ ನಗರ ಠಾಣೆಯ ಪೊಲೀಸ್ ನಿರೀಕ್ಷಕ ಅನಂತ ಪದ್ಮನಾಭ ಅವರು ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಪಾಣೆಮಂಗಳೂರು ಬ್ಲಾಕ್ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಿರಾಜ್ ಮದಕ, ಸಮದ್ ಕೈಕಂಬ, ಶಫೀಕ್ ಗೂಡಿನ ಬಳಿ ಆರೋಪಿಯನ್ನು ತಕ್ಷಣ ಬಂಧಿಸುವಂತೆ ಒತ್ತಾಯಿಸಿದ್ದಾರೆ.