Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

‘ಸುಲಿಗೆ ಸುಪುತ್ರನಿಂದ ಕಾಸಿಗಾಗಿ ಹುದ್ದೆ ವ್ಯವಹಾರ’ – ಯತೀಂದ್ರ ವಿಡಿಯೋಗೆ ಎಚ್‌‌ಡಿಕೆ ಕಿಡಿ

ಬೆಂಗಳೂರು: ಸಿಎಂ ಸಿದ್ದರಾಮಯ್ಯನವರ ಪುತ್ರ ಹಾಗೂ ವರುಣಾ ಕ್ಷೇತ್ರದ ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಫೋನ್‌ನಲ್ಲಿ ಸಂಭಾಷಣೆ ಮಾಡಿರೋ ವಿಡಿಯೋ ಒಂದು ವೈರಲ್ ಆಗಿದೆ. ಜನರ ಮುಂದೆಯೇ ಸಿಎಂ ಸಿದ್ದರಾಮಯ್ಯಗೆ ಕರೆ ಮಾಡಿರೋ ಯತೀಂದ್ರ ನಾನು‌ ಹೇಳಿದ್ದಷ್ಟೇ ಮಾಡಿ, ಆ ಲಿಸ್ಟ್ ನಾನು ಕೊಟ್ಟೇ ಇಲ್ಲ ಎಂದು ಮಹದೇವ ಅನ್ನೋರನ್ನ ತರಾಟೆ ತೆಗೆದುಕೊಂಡಿದ್ದಾರೆ.

ಮೈಸೂರಿನ ಕೀಳನಪುರ ಗ್ರಾಮದ ಬಳಿ ನಡೆದ ಜನ ಸಂಪರ್ಕ ಸಭೆಯಲ್ಲಿ ಯತೀಂದ್ರ ಸಿದ್ದರಾಮಯ್ಯ ಅವರು ಮಾತನಾಡಿದ್ದಾರೆ. ಸದ್ಯ ಯತೀಂದ್ರ ಸಿದ್ದರಾಮಯ್ಯ ಅವರ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ತೀವ್ರ ಸಂಚಲನ ಸೃಷ್ಟಿಯಾಗಿದೆ. ಈ ವಿಡಿಯೋವನ್ನು ಟ್ಯಾಗ್ ಮಾಡಿರುವ ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ಅವರು ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಮುಗಿಬಿದ್ದಿದ್ದಾರೆ.

ಸಾಮಾಜಿಕ ಜಾಲತಾಣ X ನಲ್ಲಿ ಟ್ವೀಟ್ ಮಾಡಿರುವ ಹೆಚ್‌.ಡಿ.ಕುಮಾರಸ್ವಾಮಿ ಕಾಸಿಗಾಗಿ ಹುದ್ದೆ ಉರುಫ್ ಕ್ಯಾಶ್ ಫಾರ್ ಪೋಸ್ಟಿಂಗ್ ದಂಧೆ ಕರ್ನಾಟಕದಲ್ಲಿ ನಡೆಯುತಿದೆ ಎನ್ನುವುದಕ್ಕೆ ಈ ವಿಡಿಯೋ ತುಣುಕೇ ಸಾಕ್ಷಿ. ಕಾಂಗ್ರೆಸ್‌ ಸರ್ಕಾರದ ವಸೂಲಿ ಬಿಸ್ನೆಸ್ ಹಾದಿ ಬೀದಿಗೆ ಬಂದಿದೆ. ಡೋಂಗಿ ಹರಿಕಾರನ ಅಸಲಿ ಮುಖ ಹಾದಿಬೀದಿಯಲ್ಲಿ ಮೂರು ಕಾಸಿಗೆ ಹರಾಜಾಗಿದೆ ಎಂದಿದ್ದಾರೆ.

ಸ್ವತಃ ಮುಖ್ಯಮಂತ್ರಿಯೇ ಫೋನ್ ಕೊಡುವಷ್ಟು ಪ್ರಭಾವಿಯಾದ ಆ ಆಸಾಮಿ ಯಾರು? ಇಷ್ಟಕ್ಕೂ ಆ ಮಹದೇವ ಎನ್ನುವ ವ್ಯಕ್ತಿ ಯಾರು? ಹಿಂದೊಮ್ಮೆ ನಾನೇ ಸುದ್ದಿಗೋಷ್ಠಿಯಲ್ಲಿ ಹೇಳಿದ್ದೆ. ಪ್ರತೀ ವರ್ಗಾವಣೆಗೆ ತಲಾ 30 ಲಕ್ಷ ರೂ. ಪೀಕುತ್ತಿದ್ದ ಗಿರಾಕಿ ಈತ ಎಂದು ತಿಳಿಸಿದ್ದೆ. ಕುಮಾರಸ್ವಾಮಿ ಹಿಟ್ ಅಂಡ್ ರನ್ ಗಿರಾಕಿ ಎಂದಿದ್ದ ಸಿಎಂ ಈಗ ಏನು ಹೇಳುತ್ತಾರೆ? ನೀವು, ನಿಮ್ಮ ಮಗ ಎಷ್ಟು ಪರ್ಸೆಂಟ್ ಗೆ ಹುದ್ದೆಗಳನ್ನು ಮಾರಿದ್ದೀರಿ? ಎಂದು ಪ್ರಶ್ನಿಸಿದ್ದಾರೆ.

ವಿಡಿಯೋದಲ್ಲಿರುವ ವಿಷಯ ಸುಳ್ಳೋ, ನಿಜವೋ ನಾಡಿನ ಜನ ತೀರ್ಮಾನ ಮಾಡುತ್ತಾರೆ. ಸಾರ್ವಜನಿಕ ಸಭೆಯಲ್ಲೇ ನಿಮ್ಮ ಸುಲಿಗೆಪುತ್ರ ಕಾಸಿಗಾಗಿ ಹುದ್ದೆ ವ್ಯವಹಾರವನ್ನು ಬಟಾಬಯಲು ಮಾಡಿ ನಿಮ್ಮ ವಸೂಲಿ ದಂಧೆಯನ್ನು ಬೆತ್ತಲು ಮಾಡಿದ್ದಾರಲ್ಲ. ಅದಕ್ಕೆ ಬೆಲೆ ಕೊಟ್ಟು ರಾಜೀನಾಮೆ ಕೊಡಿ. ಕೂಡಲೇ ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ಕೊಡಿ ಎಂದು ಹೆಚ್‌.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.