ಸೂರ್ಯ, ಚಂದ್ರನ ಬಳಿಕ ನಕ್ಷತ್ರಪುಂಜದತ್ತ ಕಣ್ಣಿಟ್ಟ ಇಸ್ರೋ
ನವದೆಹಲಿ: ಚಂದ್ರಯಾನ -3 ಯಶಸ್ವಿಯ ಬಳಿಕ ಆದಿತ್ಯ- ಎಲ್ 1 ಉಡಾವಣೆಗೊಳಿಸಿರುವ ಇಸ್ರೋ ಇದೀಗ ನಕ್ಷತ್ರಪುಂಜದತ್ತ ಕಣ್ಣಿಟ್ಟಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಬ್ರಹ್ಮಾಂಡದಲ್ಲಿನ ಕೆಲವು ನಿಗೂಢ ರಹಸ್ಯಗಳನ್ನು ಭೇದಿಸುವ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿದ್ದು, ’ಎಕ್ಸ್‌ಪೋಸ್ಯಾಟ್'(ಎಕ್ಸ್-ರೇ ಪೋಲಾರಿಮೀಟರ್ ಸ್ಯಾಟಲೈಟ್) ಪ್ರಾಜೆಕ್ಟ್ ಬಗ್ಗೆ ಘೋಷಿಸಿದೆ.
ಇನ್ನು ಭೂಮಿಯ ಕೆಳ ಕಕ್ಷೆಯನ್ನು ತಲುಪಲಿರುವ ಈ ಬಾಹ್ಯಾಕಾಶನೌಕೆಯಲ್ಲಿ ಎರಡು ಪ್ರಮುಖ ವೈಜ್ಞಾನಿಕ ಸಲಕರಣೆಗಳು ಇರುತ್ತವೆ. ಈ ಪೈಕಿ ಒಂದು ಪಾಲಿಕ್ಸ್(ಪೋಲಾರಿಮೀಟರ್ ಇನ್‌ಸ್ಟ್ರೆಮೆಂಟ್ ಇನ್ ಎಕ್ಸ್-ರೇಸ್). ಧ್ರುವೀಕರಣದ ಮಟ್ಟ, ಕೋನ ಸೇರಿದಂತೆ ಧ್ರುವೀಯ ಮಾನದಂಡವನ್ನು ಅಳೆಯಲು ಸಾಧ್ಯವಾಗುವಂತೆ ಪಾಲಿಕ್ಸ್ ಅನ್ನು ವಿನ್ಯಾಸಗೊಳಿಸಲಾಗಿದೆ. ಇದು ಮಧ್ಯಮ ಪ್ರಮಾಣದ(8-30 ಕಿಲೋ ಎಲೆಕ್ಟ್ರಾನ್ ವೋಲ್ಟ್) ಎಕ್ಸ್-ರೇ ಶಕ್ತಿಯತ್ತ ಗಮನ ಕೇಂದ್ರೀಕರಿಸಿರುತ್ತದೆ.
ಎರಡನೆಯದ್ದು ಎಕ್ಸ್‌ಸ್ಪೆಕ್ಟ್(ಎಕ್ಸ್-ರೇ ಸ್ಪೆಕ್ಟ್ರೋಸ್ಕೋಪಿ ಆ್ಯಂಡ್ ಟೈಮಿಂಗ್) ಸಾಧನ. ಇದು 0.8ರಿಂದ 15 ಕಿಲೋ ಎಲೆಕ್ಟ್ರಾನ್ ವೋಲ್ಟ್ ಶಕ್ತಿಯ ವ್ಯಾಪ್ತಿಯಲ್ಲಿ ಸ್ಪೆಕ್ಟ್ರೋಸ್ಕೋಪಿಕ್ ದತ್ತಾಂಶಗಳನ್ನು ಒದಗಿಸುತ್ತದೆ ಎನ್ನಲಾಗಿದೆ.