‘ಸೋಮಣ್ಣ ಅವರಿಗೆ ಹೈಕಮಾಂಡ್ ಟಿಕೆಟ್ ನೀಡಿದರೆ ನಮ್ಮದೇನೂ ತಕರಾರಿಲ್ಲ’- ಆರ್.ಅಶೋಕ್
ಬೆಂಗಳೂರು: ಮಾಜಿ ಸಚಿವ ವಿ.ಸೋಮಣ್ಣರಿಗೆ ರಾಜ್ಯಸಭಾ ಟಿಕೆಟ್ ನೀಡುವುದಕ್ಕೆ ನಮ್ಮದೇನೂ ತಕರಾರಿಲ್ಲ. ಪಕ್ಷದ ಹೈಕಮಾಂಡ್ ಟಿಕೆಟ್ ನೀಡಿದರೆ ನಾನು ಸ್ವಾಗತಿಸುತ್ತೇನೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸೋಮಣ್ಣನವರು ದೆಹಲಿಯಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಬಂದಿದ್ದಾರೆ. ದೆಹಲಿಯಿಂದ ಮರಳಿದ ತಕ್ಷಣವೇ ನನಗೆ ದೂರವಾಣಿ ಕರೆ ಮಾಡಿ ಮಾತನಾಡಿದರು. ಎಲ್ಲಾ ಒಳ್ಳೆಯದಾಗಿದೆ, ಏನೂ ಸಮಸ್ಯೆ ಇಲ್ಲ. ಪಕ್ಷದಲ್ಲಿ ನಾವೆಲ್ಲರೂ ಜೊತೆಗೂಡಿ ಪಕ್ಷವನ್ನು ಮುನ್ನಡೆಸುವ ಮೂಲಕ ಮತ್ತೆ ಪ್ರಧಾನಿ ಮೋದಿವರನ್ನು ಗೆಲ್ಲಿಸಿಕೊಡೋಣ ಎಂದು ತಿಳಿಸಿದ್ದಾರೆ.
ಅಮಿತ್ ಶಾ ಜೊತೆಗೆ ಸೋಮಣ್ಣ ಏನು ಮಾತಾಡಿದ್ದಾರೆ ಅಂತ ನನಗೆ ತಿಳಿದಿಲ್ಲ. ಈ ವಿಚಾರವನ್ನು ನಾನು ಮಾಧ್ಯಮದಲ್ಲಿ ನೋಡಿದೆ. ನನ್ನ ಜೊತೆಗೂ ಮಾತಾಡುವಾಗ ರಾಜ್ಯಸಭಾ ಟಿಕೆಟ್ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಈಗಾಗಲೇ ಕೇಂದ್ರ ನಾಯಕರೇ ಟಿಕೆಟ್ ನೀಡಲು ಒಪ್ಪಿಕೊಂಡಿರುವ ಕಾರಣ ನಮಗೇನು ಸಮಸ್ಯೆ ಇಲ್ಲ ಎಂದರು.