‘ಸೋಲಿನ ಬಳಿಕ ಕರ್ನಾಟಕ ಬಿಜೆಪಿಯನ್ನು ದೆಹಲಿ ನಾಯಕರು ಕಸದಂತೆ ಕಾಣುತ್ತಿದ್ದಾರೆಯೇ’? – ಕಾಂಗ್ರೆಸ್
ಬೆಂಗಳೂರು: ಹಿನಾಯ ಸೋಲಿನ ಬಳಿಕ ಕರ್ನಾಟಕದ ಬಿಜೆಪಿಯನ್ನು ದೆಹಲಿಯ ನಾಯಕರು ಕಾಲ ಕೆಳಗಿನ ಕಸದಂತೆ ಕಾಣುತ್ತಿದ್ದಾರೆಯೇ? ಅಥವಾ ಆಂತರಿಕ ಕಲಹ ಇನ್ನೂ ಮುಗಿದಿಲ್ಲವೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ತಿಂಗಳು ಕಳೆದರೂ ಇತ್ತ ವಿರೋಧ ಪಕ್ಷದ ನಾಯಕರ ಆಯ್ಕೆ ನಡೆದಿಲ್ಲ. ಹಾಗಾಗಿ ಬಿಜೆಪಿ ಹೈಕಮಾಂಡ್ ವರಿಷ್ಠರಿಗೆ ಇನ್ನೂ ಸೂಕ್ತ ಸಂದರ್ಭ, ಸೂಕ್ತ ಸಮಯ, ಸೂಕ್ತ ಮುಹೂರ್ತ ಕೂಡಿ ಬಂದಿಲ್ಲವೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಇತ್ತೀಚೆಗೆ ಕಾಂಗ್ರೆಸ್ ಪಕ್ಷ ಟ್ವೀಟ್ ಮಾಡಿ ವಿರೋಧ ಪಕ್ಷದ ನಾಯಕರೊಬ್ಬರು ಬೇಕಾಗಿದ್ದಾರೆ ಎಂದು ವ್ಯಂಗ್ಯವಾಡಿತ್ತು. ಆದರೆ ಇದುವರೆಗೆ ವಿರೋಧ ಪಕ್ಷದ ನಾಯಕನ್ನು ಬಿಜೆಪಿ ಆಯ್ಕೆ ಮಾಡದಿರುವ ಹಿನ್ನಲೆಯಲ್ಲಿ ಮತ್ತೆ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ನಮ್ಮ ಪ್ರಕಟಣೆಗೆ ಇನ್ನೂ ಸ್ಪಂದನೆ ಸಿಕ್ಕಿಲ್ಲ, ಹಿನಾಯ ಸೋಲಿನ ಬಳಿಕ ಕರ್ನಾಟಕದ ಬಿಜೆಪಿಯನ್ನು ದೆಹಲಿಯ ನಾಯಕರು ಕಾಲ ಕೆಳಗಿನ ಕಸದಂತೆ ಕಾಣುತ್ತಿದ್ದಾರೆಯೇ? ಅಥವಾ ಆಂತರಿಕ ಕಲಹ ಇನ್ನೂ ಮುಗಿದಿಲ್ಲವೇ? ಎಂದು ಪ್ರಶ್ನಿಸಿದೆ.
ಇನ್ನು ವಿರೋಧ ಪಕ್ಷದ ನಾಯಕರೊಬ್ಬರು ಬೇಕಾಗಿದ್ದಾರೆ. ಸಂವಿಧಾನವನ್ನು ತಿಳಿದವರು, ಪ್ರಜಾಪ್ರಭುತ್ವವನ್ನು ಅರಿತವರು ವಿಪಕ್ಷ ನಾಯಕರೊಬ್ಬರು ಬೇಕಾಗಿದ್ದಾರೆ. ಸಿಡಿಗೆ ತಡೆಯಜ್ಞೆ ತರದವರು, ಭ್ರಷ್ಟಾಚಾರಿಯಲ್ಲದವರು ವಿಪಕ್ಷ ನಾಯಕ ಬೇಕಾಗಿದ್ದಾರೆ. ಆರ್‌ಎಸ್‌ಎಸ್ ಕೈಗೊಂಬೆಯಾಗದವರು, ಕೋಮುವಾದಿ ಅಲ್ಲದವರು ವಿಪಕ್ಷ ನಾಯಕ ಬೇಕಾಗಿದ್ದಾರೆ. ವಾಟ್ಸಾಪ್ ಯೂನಿವರ್ಸಿಟಿಯಲ್ಲಿ ಪದವಿ ಪಡೆದಿರಬಾರದು, ಸುಳ್ಳು ಹೇಳಬಾರದು. ಘನತೆಯ ವ್ಯಕ್ತಿತ್ವದವರು, ತೂಕದ ಮಾತಿನವರು ವಿಪಕ್ಷ ನಾಯಕ ಬೇಕಾಗಿದ್ದಾರೆ. ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲು ವಿಪಕ್ಷ ನಾಯಕರೊಬ್ಬರು ಬೇಕಾಗಿದ್ದಾರೆ! ಎಂದು ಈ ಹಿಂದೆ ಕಾಂಗ್ರೆಸ್ ಟ್ವೀಟ್ ಮಾಡಿತ್ತು.