ಹತ್ತೇ ನಿಮಿಷದಲ್ಲಿ ಬ್ಯಾಂಕ್ ನಿಂದ 18.85 ಕೋಟಿ ರೂ. ದರೋಡೆ.!
ಮಣಿಪುರ: ಬ್ಯಾಂಕಿಗೆ ನುಗ್ಗಿದ ಮುಸುಕುಧಾರಿ ಬಂದೂಕುಧಾರಿಗಳು ಹತ್ತೇ ನಿಮಿಷದಲ್ಲಿ 18 ಕೋಟಿ ರೂ ನಗದು ದರೋಡೆ ಮಾಡಿದ ಪರಾರಿಯಾದ ಘಟನೆ ಮಣಿಪುರದ ಉಖ್ರುಲ್ ಶಾಖೆಯ ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ನಡೆದಿದೆ.
ಉಖ್ರುಲ್ ಪಟ್ಟಣದ ಪ್ರಮುಖ ಬಜಾರ್ಗಳಲ್ಲಿ ಒಂದಾದ ವ್ಯೂಲ್ಯಾಂಡ್-I ನಲ್ಲಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ ಗುರುವಾರ ಸಂಜೆ 5.40ರ ಸುಮಾರಿಗೆ ಮುಸುಕುಧಾರಿ ಬಂದೂಕುಧಾರಿಗಳು ಬ್ಯಾಂಕ್ ಮ್ಯಾನೇಜರ್ ಅನ್ನು ಒತ್ತೆಯಾಳಾಗಿಟ್ಟುಕೊಂಡು 18.85 ಕೋಟಿ ರೂ. ದರೋಡೆ ನಡೆಸಿದ್ದಾರೆ.
ಪ್ರತ್ಯಕ್ಷದರ್ಶಿಗಳಪ್ರಕಾರ, ಬ್ಯಾಂಕ್ ನೌಕರರು ದಿನದ ವಹಿವಾಟಿನ ಬಳಿಕ ನಗದು ಎಣಿಸುತ್ತಿದ್ದಾಗ 8 ರಿಂದ 10 ಮಂದಿಯ ಶಸ್ತ್ರಸಜ್ಜಿತ್ ತಂಡ ನುಗ್ಗಿ 18.85 ಕೋಟಿ ರೂ. ದರೋಡೆ ನಡೆಸಿದೆ. ಮುಸುಕುಧಾರಿಗಳು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದು, ಬ್ಯಾಂಕ್ ಭದ್ರತಾ ಸಿಬ್ಬಂದಿ ಹಾಗೂ ಪಿಎನ್ಬಿ ಶಾಖೆಯ ಸಿಬ್ಬಂದಿಯನ್ನು ಬೆದರಿಸಿ ಕೃತ್ಯ ನಡೆಸಿದ್ದಾರೆ.
ಕೇವಲ ಹತ್ತೇ ನಿಮಿಷದಲ್ಲಿ ನಡೆದ ಕೃತ್ಯದಲ್ಲಿ”ಭದ್ರತಾ ಸಿಬ್ಬಂದಿ ಮತ್ತು ಬ್ಯಾಂಕ್ ಸಿಬ್ಬಂದಿಯನ್ನು ಬಂದೂಕಿನಿಂದ ಬೆದರಿಸಿ ಹಗ್ಗಗಳಿಂದ ಕಟ್ಟಿ, ನಗದು ಸಹಿತ ಪರಾರಿಯಾಗಿದ್ದಾರೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಏಳು ತಿಂಗಳ ಹಿಂದೆ ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದ ನಂತರ ಉಖ್ರುಲ್ ಪಟ್ಟಣದಲ್ಲಿ ಇಂತಹ ಕೃತ್ಯ ನಡೆದಿರುವುದು ಇದೇ ಮೊದಲು.