Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಹತ್ತೇ ನಿಮಿಷದಲ್ಲಿ ಮಾಡಿ ಓಟ್ಸ್ ಉಪ್ಪಿಟ್ಟು – ಮಾಡೋದು ತುಂಬಾ ಸಿಂಪಲ್..

ಅನೇಕ ಮನೆಗಳಲ್ಲಿ ಉಪ್ಪಿಟ್ಟು ಬಹಳ ಸಾಮಾನ್ಯವಾಗಿರುತ್ತವೆ ಮತ್ತು ಮುಖ್ಯವಾಗಿ ಬೆಳಗಿನ ತಿಂಡಿಗೆ ಮಾಡಲಾಗುತ್ತದೆ. ಆದರೆ ಮಕ್ಕಳಿಗೆ ಉಪ್ಪಿಟ್ಟು ಅಂದರೆ ಇಷ್ಟವಾಗುವುದಿಲ್ಲ. ಆದರೆ ಅದನ್ನು ಮಾಡುವ ಹಲವಾರು ವಿಧಾನಗಳಿದ್ದು, ಉಪ್ಪಿಟ್ಟಿನಲ್ಲಿ ಸಹ ವೆರೈಟಿ ಇದೆ. ಸಬ್ಬಕ್ಕಿ ಉಪ್ಪಿಟ್ಟು, ಓಟ್ಸ್ ಒಪ್ಪಿಟ್ಟು, ಹೀಗೆ.. ಅದರಲ್ಲೂ ಹೆಚ್ಚು ಪ್ರಸಿದ್ದವಾದ ವಿಧ ಎಂದರೆ ಓಟ್ಸ್ ಉಪ್ಪಿಟ್ಟು.

ಹುಳಿ ಹುಳಿ ಖಾರ ಖಾರ ರುಚಿಯಾಗಿರುವ ಈ ಉಪ್ಪಿಟ್ಟು ಅಂದ್ರೆ ಮಕ್ಕಳಿಗೂ ಇಷ್ಟ. ಅಲ್ಲದೇ ಇದು ತೂಕ ಇಳಿಸಲು ಸಹ ಸಹಕಾರಿ. ಹಾಗಾದ್ರೆ ಕೇವಲ 10 ನಿಮಿಷದಲ್ಲಿ ಓಟ್ಸ್ ಉಪ್ಪಿಟ್ಟು ಮಾಡುವುದು ಹೇಗೆ ಎಂಬುದು ಇಲ್ಲಿದೆ.

ಬೇಕಾಗುವ ಪದಾರ್ಥಗಳು

  • 2 ಕಪ್ ಓಟ್ಸ್
  • 3 ಕಪ್ ನೀರು
  • 1/2 ಟೀಸ್ಪೂನ್ ಉದ್ದಿನ ಬೇಳೆ
  • 1 ದೊಡ್ಡ ಈರುಳ್ಳಿ
  • 1 ಟೊಮ್ಯಾಟೊ
  • 2 ಹಸಿರು ಮೆಣಸಿನಕಾಯಿ
  • 6 ಕರಿ ಬೇವಿನ ಎಲೆ
  • 1 ಟೀಸ್ಪೂನ್ ಸಣ್ಣಗೆ ಹೆಚ್ಚಿದ ಶುಂಠಿ
  • 1/4 ಟೀಸ್ಪೂನ್ ಅರಿಶಿನ ಪುಡಿ
  •   ಅಡುಗೆ ಎಣ್ಣೆ ಅಗತ್ಯಕ್ಕೆ ತಕ್ಕಷ್ಟು
  •  ರುಚಿಗೆ ತಕ್ಕಷ್ಟು ಉಪ್ಪು
  •  2ಟೀಸ್ಪೂನ್ ಸಣ್ಣಗೆ ಹೆಚ್ಚಿದ ಕೊತ್ತಂಬರಿ
  •  1/2ಕಪ್ ತೆಂಗಿನ ತುರಿ
  •  1/2ಟೀಸ್ಪೂನ್ ಸಾಸಿವೆ

ಮಾಡುವ ವಿಧಾನ

ಮೊದಲು ಈರುಳ್ಳಿ, ಟೊಮ್ಯಾಟೊ, ಶುಂಠಿ, ಕೊತ್ತಂಬರಿ ಸೊಪ್ಪು ಮತ್ತು ಹಸಿರು ಮೆಣಸಿನಕಾಯಿ ಕತ್ತರಿಸಿಟ್ಟುಕೊಂಡು, ನಂತರ ಒಂದು ಬಾಣಲೆಯನ್ನು ತೆಗೆದುಕೊಂಡು ಎಣ್ಣೆ ಹಾಕಿ ಕಾಯಿಸಿ, ಎಣ್ಣೆ ಕಾದ ನಂತರ ಸಾಸಿವೆ ಮತ್ತು ಉದ್ದಿನ ಬೆಳೆ ಹಾಕಿ. ಸಾಸಿವೆ ಸಿಡಿದ ಕೂಡಲೇ ಕರಿಬೇವು, ಕತ್ತರಿಸಿದ ಶುಂಠಿ, ಈರುಳ್ಳಿ ಮತ್ತು ಹಸಿರು ಮೆಣಸಿನಕಾಯಿ ಸೇರಿಸಿ ಮಿಶ್ರಣ ಮಾಡಿ. ಈರುಳ್ಳಿ ಮೆತ್ತಗಾದ ಮೇಲೆ ಟೊಮ್ಯಾಟೊ ಹಾಕಿ.

ನಂತರ ಉಪ್ಪು ಮತ್ತು ಅರಶಿನ ಪುಡಿ ಸೇರಿಸಿ. ಟೊಮ್ಯಾಟೊ ಮೆತ್ತಗಾಗುವವರೆಗೆ ಚನ್ನಾಗಿ ಹುರಿಯಿರಿ. ಅಳತೆ ಪ್ರಕಾರ ನೀರು ಹಾಕಿ ಕುದಿಸಿ. ನೀರು ಕುದಿಯಲು ಪ್ರಾರಂಭವಾದಾಗ ಕೂಡಲೇ ಓಟ್ಸ್ ಹಾಕಿ ಮುಚ್ಚಿ ಇಡಿ.

ಎರಡು ನಿಮಿಷದ ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ ಬೇಯಲು ಬಿಡಿ. ನೀರಾರುತ್ತ ಬಂದಾಗ ಮುಚ್ಚಳ ತೆಗೆದು ತೆಂಗಿನ ತುರಿ, ಕೊತ್ತಂಬರಿ ಸೊಪ್ಪು ಸೇರಿಸಿ ಮುಚ್ಚಿ. ಮತ್ತೆ ಮುಚ್ಚಳ ಮುಚ್ಚಿ 2-3 ನಿಮಿಷಗಳ ಕಾಲ ಬೇಯಲು ಬಿಡಿ. ಗ್ಯಾಸ್ ಆಫ್ ಮಾಡಿ. 5 ನಿಮಿಷಗಳ ಹಾಗೆಯೇ ಬಿಡಿ ನಂತರ ಸೇವಿಸಿ.