Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಹರಿಯಾಣದಲ್ಲಿ ಕೋಮುಗಲಭೆಗೆ 144 ಸೆಕ್ಷನ್​ ಜಾರಿ, ಇಂಟರ್ನೆಟ್ ಸೇವೆ​ ಸ್ಥಗಿತ

ಚಂಡೀಗಢ : ಹರಿಯಾಣದಲ್ಲಿ ಸಂಭವಿಸಿದ ಕೋಮುಗಲಭೆಯಲ್ಲಿ ಐದು ಮಂದಿ ಸಾವನ್ನಪ್ಪಿದ್ದು, ಇತರ 45 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗುರುಗ್ರಾಮ್‍ಗೆ ಹೊಂದಿಕೊಂಡಿರುವ ಹರಿಯಾಣದ ನುಹ್‍ನಲ್ಲಿ ನಡೆದ ಧಾರ್ಮಿಕ ಮೆರವಣಿಗೆಯಲ್ಲಿ ಘರ್ಷಣೆ ಪ್ರಾರಂಭವಾಗಿ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ಇಬ್ಬರು ಗೃಹ ರಕ್ಷಕ ಸಿಬ್ಬಂದಿಗಳು ಸೇರಿದಂತೆ ಐವರು ಸಾವನ್ನಪ್ಪಿದ್ದು, ಕನಿಷ್ಠ 45 ಮಂದಿ ಗಾಯಗೊಂಡಿದ್ದಾರೆ. ಸೋಮವಾರ ವಿಶ್ವ ಹಿಂದು ಪರಿಷತ್​ (ವಿಎಚ್​ಪಿ) ಮೆರವಣಿಗೆಯ ಸಮಯದಲ್ಲಿ ಸಂದರ್ಭದಲ್ಲಿ ಕೆಲ ಗುಂಪಿನ ಜನರು ವಿಶ್ವ ಹಿಂದು ಪರಿಷತ್ತಿನ ಮೆರವಣಿಗೆಯನ್ನು ತಡೆಯಲು ಪ್ರಯತ್ನಿಸಿದಾಗ ಹಿಂಸಾಚಾರ ಮೊದಲು ಭುಗಿಲೆದ್ದಿತು. ಎರಡು ಗುಂಪುಗಳ ನಡುವೆ ಘರ್ಷಣೆ ಭುಗಿಲೆದ್ದಿದ್ದರಿಂದ ಕಲ್ಲು ತೂರಾಟ ನಡೆಸಿ ಕಾರುಗಳಿಗೆ ಬೆಂಕಿ ಹಚ್ಚಲಾಗಿದೆ. ಹಿಂಸಾತ್ಮಕ ಘಟನೆಗಳ ಹಿನ್ನೆಲೆಯಲ್ಲಿ ಗುರುಗ್ರಾಮ ಮತ್ತು ಫರಿದಾಬಾದ್‌ನಲ್ಲಿರುವ ಎಲ್ಲ ಶಾಲಾ ಮತ್ತು ಕಾಲೇಜುಗಳಿಗೆ ಇಂದು ರಜೆ ಘೋಷಣೆ ಮಾಡಲಾಗಿದೆ. ಗುರುಗ್ರಾಮ ಮತ್ತು ನುಹ್‌ನಲ್ಲಿ ಕೋಡ್​ ಆಫ್​ ಕ್ರಿಮಿನಲ್​ ಪ್ರೊಸಿಜರ್​ (ಸಿಆರ್​ಪಿಸಿ) ಸೆಕ್ಷನ್ 144ರ ಅಡಿಯಲ್ಲಿ ನಿಷೇಧಾಜ್ಞೆಗಳನ್ನು ವಿಧಿಸಲಾಗಿದೆ. ತೀವ್ರವಾಗಿ ಕೋಮು ಉದ್ವಿಗ್ನತೆಯನ್ನು ನಿಯಂತ್ರಿಸಲು ನುಹ್ ಜಿಲ್ಲೆಯಲ್ಲಿ ಮೊಬೈಲ್ ಇಂಟರ್​ನೆಟ್​ ಸೇವೆಗಳನ್ನು ಆಗಸ್ಟ್ 2ರ ಬುಧವಾರದವರೆಗೆ ಸ್ಥಗಿತಗೊಳಿಸಲಾಗಿದೆ ಎಂದು ಹರಿಯಾಣ ಸರ್ಕಾರ ತಿಳಿಸಿದೆ.