ಹಸಮಣೆ ಏರಲು ಸಜ್ಜಾದ ‘ಗಿಲ್ಲಿ’ ನಟಿ ರಾಕುಲ್ ಪ್ರೀತ್ ಸಿಂಗ್
ಜ 2 : ಕನ್ನಡದ ‘ಗಿಲ್ಲಿ’ ಚಿತ್ರದ ಮೂಲಕ ನಟನೆಗೆ ಎಂಟ್ರಿ ಕೊಟ್ಟ ಬಹುಭಾಷಾ ನಟಿ ರಾಕುಲ್ ಪ್ರೀತ್ ಸಿಂಗ್ ತಮ್ಮ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ. ಬಾಲಿವುಡ್ ನಿರ್ಮಾಪಕ ಜಾಕಿ ಭಗ್ನಾನಿ ಜೊತೆ ಮದುವೆಗೆ ರಾಕುಲ್ ಸಜ್ಜಾಗಿದ್ದು, ಮದುವೆಯ ಡೇಟ್ ಕೂಡ ಫಿಕ್ಸ್ ಆಗಿದೆ.
ಬಹು ದಿನಗಳಿಂದ ಪ್ರೀತಿಸುತ್ತಿರುವ ಬಾಲಿವುಡ್ ನಿರ್ಮಾಪಕ ಜಾಕಿ ಭಗ್ನಾನಿ ಮತ್ತು ರಾಕುಲ್ ಪ್ರೀತ್ ಸಿಂಗ್ ಅವರು ಇದೇ ಬರುವ ಫೆ. 22 ರಂದು ಕುಟುಂಬಸ್ಥರು ಹಾಗೂ ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಗೋವಾದ ಜನಪ್ರಿಯ ರೆಸಾರ್ಟ್ನಲ್ಲಿ ವಿವಾಹವಾಗಲಿದ್ದಾರೆ ಎಂದು ತಿಳಿದು ಬಂದಿದೆ.
ಮದುವೆ ಬಳಿಕ ಸೆಲೆಬ್ರಿಟಿಗಳಿಗೆ ವಿಶೇಷ ಔತಣಕೂಟ ಕೂಡ ಏರ್ಪಡಿಸಿದ್ದಾರೆ. ಇನ್ನು ನಟಿಯ ಮದುವೆಯ ಸುದ್ದಿ ಕೇಳುತ್ತಿದ್ದಂತೆ ಅಭಿಮಾನಿಗಳು ನಟಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ.
ಈ ಹಿಂದೆಯೂ ಇವರ ಮದುವೆಯ ಬಗ್ಗೆ ಹಲವು ಸುದ್ದಿಗಳು ಕೇಳಿ ಬಂದಿದ್ದವು. ಆದರೆ, ಸಮಯ ಬಂದಾಗ ಖಂಡಿತ ಮದುವೆಯಾಗುತ್ತೇವೆ ಎಂದು ರಾಕುಲ್ ಸ್ಪಷ್ಟಪಡಿಸುತ್ತ ಬಂದಿದ್ದರು. ಇದೀಗ ಒಟ್ಟಿಗೆ ಇರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ವದಂತಿಗೆ ಬ್ರೇಕ್ ಹಾಕಿದ್ದಲ್ಲದೇ ಭಾವನಾತ್ಮಕ ಶೀರ್ಷಿಕೆ ಹಾಕಿ ತಮ್ಮ ತಮ್ಮ ಅನಿಸಿಕೆ ಹೇಳಿಕೊಂಡಿದ್ದಾರೆ.