
ಹಸಿದ ಬಾಲಕಿಯೊಬ್ಬಳು ಕೈಯಲ್ಲಿ ಖಾಲಿ ಬಟ್ಟಲು ಹಿಡಿದು, ಪಾಠ ನಡೆಯುತ್ತಿದ್ದ ತರಗತಿಯೊಳಗೆ ಮಧ್ಯಾಹ್ನದ ಊಟ ಮಾಡುತ್ತಿರುವ ಶಾಲಾ ಮಕ್ಕಳನ್ನು ಇಣುಕಿ ನೋಡುತ್ತಿರುವ ಫೋಟೋ ಒಂದು ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಆ ಫೋಟೋ ಎಲ್ಲರ ಮನ ಮಿಡಿಯುವ ಹಾಗೆ ಮತ್ತು ಅದೆಷ್ಟೋ ಹಸಿದ ಮಕ್ಕಳ ಸ್ಥಿತಿಯನ್ನು ತೋರಿಸುವಂತೆ ಇತ್ತು. ಈ ಪೋಟೋ ನೋಡಿದ ಒಬ್ಬ ವ್ಯಕ್ತಿ ಈಗ ಮುಂದೆ ಬಂದು ತಮ್ಮ ಹೃದಯವಂತಿಕೆ ಮೆರೆದಿದ್ದಾರೆ. ಆ ಬಾಲಕಿಗೆ ಶಾಲೆಯೊಂದರಲ್ಲಿ ದಾಖಲಾತಿ ಕೊಡಿಸಿ, ಪ್ರತಿದಿನ ಮಧ್ಯಾಹ್ನದ ಊಟ ದೊರೆಯುವಂತೆ ಮಾಡಿದ್ದಾರೆ.
ಈ ಹುಡುಗಿಯ ಹೆಸರು ದಿವ್ಯ. ಅವಳು ಪ್ರತಿದಿನ ದೇವಲ್ ಜಾಮ್ ಸಿಂಗ್ ಗವರ್ನಮೆಂಟ್ ಶಾಲೆಗೆ ಹೋಗುತ್ತಿದ್ದಳು. ಆದರೆ ಕಲಿಯಲು ಅಲ್ಲ ಬದಲಿಗೆ ಅಲ್ಲಿ ಮಧ್ಯಾಹ್ನದ ಬಿಸಿ ಊಟದ ನಂತರ ಆಳಿದುಳಿದ ಆಹಾರದಲ್ಲಿ ತನಗೇನಾದರೂ ಸಿಗಬಹುದೇನೋ ಎಂಬ ಆಸೆಯಿಂದ. ದಿವ್ಯ ಳ ತಂದೆ ಕಸ ಆಯುವ ಮತ್ತು ಗುಡಿಸುವ ಕೆಲಸ ಮಾಡುತ್ತಾ ಅಲ್ಲೇ ಪಕ್ಕದ ಕೊಳಗೇರಿಯಲ್ಲಿ ವಾಸಿಸುತ್ತಾರೆ. ದಿವ್ಯಳ ಫೋಟೋ ಎಂ.ವಿ.ಫೌಂಡೇಶನ್ ಎಂಬ ಹೆಣ್ಣು ಮಕ್ಕಳ ಹಕ್ಕುಗಳ ಹೋರಾಟದ ಎನ್.ಜಿ.ಓ. ದ ಮುಖ್ಯಸ್ಥರಾದ ವೆಂಕಟ ರೆಡ್ಡಿ ಅವರ ಕಣ್ಣಿಗೆ ಬಿದ್ದಿದೆ.
ಅವರು ದಿವ್ಯಳ ಫೋಟೋವನ್ನು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡು ಹೆಣ್ಣು ಮಗುವಿಗೆ ಶಿಕ್ಷಣ ಹಾಗೂ ಆಹಾರ ಸಿಗದ ಪರಿಸ್ಥಿತಿಯ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಅಷ್ಟಕ್ಕೇ ಸುಮ್ಮನಾಗದ ಅವರು ಸ್ವಯಂಸೇವಕರ ಜೊತೆಗೂಡಿ ದಿವ್ಯಾಳಿಗೆ ಶಾಲೆಯಲ್ಲಿ ದಾಖಲಾತಿ ಕೊಡಿಸಿ, ಅಲ್ಲೇ ಅವಳಿಗೆ ಬಟ್ಟಲು ಹಿಡಿದು ಉಳಿದ ಅನ್ನಕ್ಕಾಗಿ ಕಾಯುವ ಅಸಹಾಯಕತೆ ಬದಲಾಗಿ, ಎಲ್ಲಾ ಮಕ್ಕಳೊಡನೆ ಕುಳಿತು ಊಟ ಮಾಡುವ,ಜೊತೆಗೆ ಶಿಕ್ಷಣ ಪಡೆಯುವ ಅವಕಾಶ ಮಾಡಿಕೊಟ್ಟು ದಿವ್ಯಳಿಗೆ ನೆರವಾಗಿದ್ದಾರೆ.
ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.