ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಇತರೆ ಭಾಷೆ ಕಲಿಯಿರಿ, ಗೌರವಿಸಿ, ಕನ್ನಡದಲ್ಲೇ ವ್ಯವಹರಿಸಿರಿ: ಸಿಎಂ ಸಿದ್ದರಾಮಯ್ಯ
ಹೊಸಪೇಟೆ: ಇತರೆ ಭಾಷೆಗಳನ್ನು ಕಲಿಯಿರಿ, ಗೌರವಿಸಿ, ಆದರೆ ಕನ್ನಡದಲ್ಲೇ ವ್ಯವಹರಿಸಿರಿ ಎಂದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಹೇಳಿದರು.
ಕರ್ನಾಟಕ ಎಂದು ನಾಮಕರಣಗೊಂಡು ನವಂಬರ್ 1ಕ್ಕೆ 50 ವರ್ಷಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಗುರುವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಹಾಗೂ ವಿಜಯನಗರ ಜಿಲ್ಲಾಡಳಿತ ಇವರ ಸಹಯೋಗದಲ್ಲಿ ವಿಜಯನಗರ ಸಾಮ್ರಾಜ್ಯ ಹಂಪಿಯ ಎದುರು ಬಸವಣ್ಣ ವೇದಿಕೆಯಲ್ಲಿ ಆಯೋಜಿಸಲಾದ `ಕರ್ನಾಟಕ ಸಂಭ್ರಮ-50ರ’ ವಿಶೇಷ ಕಾರ್ಯಕ್ರಮದಲ್ಲಿ ಜ್ಯೋತಿರಥಕ್ಕೆ ಪ್ರಜ್ವಲನೆ ಮಾಡಿ, ನಗಾರಿ ಬಾರಿಸುವ ಮೂಲಕ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾತಂತ್ರö್ಯದ ನಂತರ 1956ರ ನವಂಬರ್ 1ರಂದು ಮೈಸೂರು ರಾಜ್ಯವು ಉದಯವಾಯಿತು. ಅದಕ್ಕಿಂತ ಪೂರ್ವದಲ್ಲಿ ಕನ್ನಡ ನಾಡು ವಿವಿಧ ಭಾಗಗಳಲ್ಲಿ ಹಂಚಿ ಹೋಗಿತ್ತು. ಕನ್ನಡ ಬದುಕನ್ನು ಉನ್ನತೀಕರಿಸುವ ಆಶಯದಿಂದ ಏಕೀಕರಣ ಚಳವಳಿ ನಡೆದು ಹಲವರ ಪ್ರಾಣ ತ್ಯಾಗವನ್ನೂ ಪಡೆದು ವಿಶಾಲ ಕನ್ನಡ ನಾಡು ಉದಯವಾಗಿದೆ. 1973ರ ನವಂಬರ್ 1ರಂದು ಅಂದಿನ ಮುಖ್ಯಮಂತ್ರಿಗಳಾದ ಡಿ.ದೇವರಾಜ ಅರಸುರವರು ಮೈಸೂರು ರಾಜ್ಯಕ್ಕೆ `ಕರ್ನಾಟಕ’ ಎಂದು ಮರು ನಾಮಕರಣ ಮಾಡಿ, ಇದೇ ಹಂಪಿಯಿAದ ವಿರೂಪಾಕ್ಷೇಶ್ವರ ಸನ್ನಿಧಿಯಲ್ಲಿ ವಿರೂಪಾಕ್ಷ, ಪಂಪ ಮತ್ತು ಭುವನೇಶ್ವರಿ ದೇವಿಯ ದರ್ಶನ ಪಡೆದು, ನವಂಬರ್ 2ರಂದೇ ಜ್ಯೋತಿರಥಯಾತ್ರೆಗೆ ಚಾಲನೆ ನೀಡಿದ್ದರು ಎಂದು ಹೇಳಿದರು.
ವರ್ಷವಿಡಿ ಸುವರ್ಣ ಸಭ್ರಮಾಚರಣೆ:
ಕರ್ನಾಟಕ ನಾಮಕರಣಗೊಂಡು 50ನೇ ವರ್ಷದ ಆಚರಣೆಯನ್ನು ಕಳೆದ ವರ್ಷವೇ ಮಾಡಬೇಕಿತ್ತು. ಸರ್ಕಾರ ಬಂದ ತಕ್ಷಣವೇ ಜುಲೈ ಬಜೆಟ್‌ನಲ್ಲಿ ಅವಕಾಶ ಕಲ್ಪಿಸಿ, “ಕರ್ನಾಟಕ ಸಂಭ್ರಮ-50” ನ್ನು `ಹೆಸರಾಯಿತು ಕರ್ನಾಟಕ ಉಸಿರಾಯಿತು ಕನ್ನಡ’ ಘೋಷ ವಾಕ್ಯದಡಿ ಇಡೀ ವರ್ಷ ಸಂಭ್ರಮಾಚರಣೆ ಮಾಡಲಿದ್ದು, ಕಲೆ, ಸಾಹಿತ್ಯ, ಸಂಸ್ಕೃತಿಯ ಪರಾಮರ್ಶೆ ಮತ್ತೆ-ಮತ್ತೆ ಜಾಗೃತಿಗೊಳಿಸುವಂತಹ ಕಾರ್ಯಕ್ರಮ ಮಾಡಲು ಸಂಕಲ್ಪ ಮಾಡಿದ್ದೇವೆ ಎಂದರು.
ಬಸವಣ್ಣನ ನಾಡು ಇದು. ಕಲ್ಯಾಣ ಕರ್ನಾಟಕ ಎಂದು ಕೇವಲ ಹೆಸರಿಟ್ಟರೆ ಸಾಲದು. ನಿಜವಾದ ಅರ್ಥದಲ್ಲಿ ಈ ಭಾಗದ ಜನರ ಕಲ್ಯಾಣ ಕಾಣಬೇಕು ಎನ್ನುವ ಗುರಿ ಇಟ್ಟುಕೊಂಡು ಕೆಲಸ ಮಾಡುತ್ತಿದ್ದೇವೆ. ಈ ಉದ್ದೇಶದಿಂದಲೇ 371 (ಜೆ) ಜಾರಿ ಮಾಡಲಾಗಿದೆ. ಧರ್ಮಸಿಂಗ್, ಮಲ್ಲಿಕಾರ್ಜುನ ಖರ್ಗೆಯವರು ಹಾಗೂ ವೈಜನಾಥ ಪಾಟೀಲ್ ಅವರು ಸೇರಿದಂತೆ ಹಲವರ ಹೋರಾಟದ ಫಲವಾಗಿ ಈ ಭಾಗಕ್ಕೆ 371 ಜೆ ಜಾರಿಯಾಗಿದೆ. ಇದು ಜಾರಿ ಆಗಿದ್ದರಿಂದ ಈ ಭಾಗಕ್ಕೆ ಹೆಚ್ಚೆಚ್ಚು ಅನುದಾನ ಅವಕಾಶಗಳು ಮತ್ತು ಇಂಜಿನಿಯರ್, ವೈದ್ಯರಾಗಲು ಮತ್ತು ಶಿಕ್ಷಕರಾಗಲು ಅವಕಾಶ ಸಿಕ್ಕಿದೆ. ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಈ ಭಾಗದ ಅಭಿವೃದ್ಧಿಗಾಗಿ ಉಳಿದ 2 ಸಾವಿರ ಕೋಟಿ ಅನುದಾನದ ಜತೆಗೆ ಹೆಚ್ಚುವರಿಯಾಗಿ ಈ ಭಾಗಕ್ಕೆ 3 ಸಾವಿರ ಕೋಟಿ ರೂ ಅನುದಾನ ನೀಡಿತ್ತೇನೆ ಎಂದರು.
ಬಸವಣ್ಣನವರ ರೀತಿ ನಾನೂ ಮೌಢ್ಯ ನಂಬುವುದಿಲ್ಲ. ನನಗೆ ಮೌಢ್ಯದಲ್ಲಿ ನಂಬಿಕೆ ಇಲ್ಲ. ಬಸವಣ್ಣನವರೂ ಸೇರಿ ಶರಣರು ಮೌಢ್ಯದ ವಿರುದ್ಧ ಹೋರಾಡಿ, ಜಾಗೃತಿ ಮೂಡಿಸಿದ್ದರು. ನಾನೂ ಕೂಡ ಮೌಢ್ಯವನ್ನು ಧಿಕ್ಕರಿಸಿ ಈ ನಾಡಿನ ಜನರ ಮೇಲೆ ನಂಬಿಕೆ ಇಟ್ಟಿದ್ದೇನೆ. ದೇವರಲ್ಲಿ, ದೇವರು ಎನ್ನುವ ಶಕ್ತಿಯಲ್ಲಿ ನನಗೆ ನಂಬಿಕೆ ಇದೆ. ಜನರಿಗೆ ಒಳಿತಾಗುವುದನ್ನು ನಾನು ನಂಬುತ್ತೇನೆ ಎಂದು ಹೇಳಿದರು.