‘ಹೈಕಮಾಂಡ್ ಹೇಳಿದರೆ ಸಚಿವ ಸ್ಥಾನ ಬಿಟ್ಟುಕೊಡಲು ಸಿದ್ದ’- ಪರಮೇಶ್ವರ್
ಬೆಂಗಳೂರು: ಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ಧ. ಹೈಕಮಾಂಡ್ ಯಾರಿಗೆ ಸಚಿವ ಸ್ಥಾನ ಬಿಟ್ಟು ಕೊಡಲು ಹೇಳಿದ್ರೆ ಅವರಿಗೆ ಬಿಟ್ಟು ಕೊಡಲು ಸಿದ್ದ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ನಾಯಕರೂ ನಮ್ಮ ಬಗ್ಗೆ ಮಾತ್ರ ಮಾತಾಡ್ತಾರೆ. ಪಕ್ಷದ ವಿಚಾರವಾಗಿ ಅವರು ಹೆಚ್ಚು ತಲೆಕೆಡಿಸಿಕೊಳ್ಳಲ್ಲ. ಅವರಿಗೆ ನಮ್ಮ ಪಕ್ಷದ ಮೇಲೆ ಹೆಚ್ಚು ಆಸಕ್ತಿ. ಅವರೆಲ್ಲ ನಮ್ಮ ಪಕ್ಷಕ್ಕೆ ಬರುತ್ತಾರೇನೋ. ಅದಕ್ಕಾಗಿ ನಮ್ಮ ಪಕ್ಷದ ಬಗ್ಗೆ ಹೆಚ್ಚು ಚರ್ಚೆ ನಡೆಸ್ತಿದ್ದಾರೇನೋ ಎಂದು ಹೇಳಿದರು.
ಕಾಂಗ್ರೆಸ್ನಲ್ಲಿ ಇನ್ನೆರಡು ಡಿಸಿಎಂ ಸ್ಥಾನಗಳ ವಿಚಾರಕ್ಕೆ ಪ್ರತಿಕ್ರಿಯಿಸಿ, ಮೂರು ಡಿಸಿಎಂ ಚರ್ಚೆ ಹಳೇದಾಯ್ತು ಅನ್ಕೊಂಡಿದ್ದೆ. ಯಾರಿಗೆ ಯಾವ ಹುದ್ದೆ ಕೊಡಬೇಕು ಯಾವ ಸಂದರ್ಭದಲ್ಲಿ ಹುದ್ದೆ ನೀಡಬೇಕು ಕುರಿತು ಹೈಕಮಾಂಡ್ ತೀರ್ಮಾನ ಎಂದು ತಿಳಿಸಿದರು.
ಇದೇ ವೇಳೆ ಮಂತ್ರಿ ಸ್ಥಾನಕ್ಕೆ ಹಲವು ಶಾಸಕರ ಆಗ್ರಹ ವಿಚಾರದ ಕುರಿತು ಮಾತನಾಡಿ, ಎಲ್ಲರೂ ಮಂತ್ರಿ ಆಗೋದು ಒಳ್ಳೆಯದೇ. ಹೈಕಮಾಂಡ್ ಇದರ ಬಗ್ಗೆ ನಿರ್ಧಾರ ಮಾಡಲಿದೆ. ಹೈಕಮಾಂಡ್ ಯಾರಿಗೆ ಸಚಿವ ಸ್ಥಾನ ಬಿಟ್ಟು ಕೊಡುವಂತೆ ಹೇಳಿದರೆ ಬಿಟ್ಟು ಕೊಡುವುದಾಗಿ ಎಂದು ಹೇಳಿದರು.
ಶಾಸಕರ ಹೇಳಿಕೆಗಳ ಬಗ್ಗೆ ಅಧ್ಯಕ್ಷರು ನಿಯಂತ್ರಣ ಮಾಡ್ತಾರೆ. ಈಗಾಗಲೇ ಬಹಿರಂಗ ಹೇಳಿಕೆ ಕೊಡಬೇಡಿ ಅಂತ ಅಧ್ಯಕ್ಷರು ಸೂಚಿಸಿದ್ದಾರೆ. ರಮೇಶ್ ಜಾರಕಿಹೊಳಿ ಹೇಳಿಕೆಗಳಿಗೆ ಉತ್ತರ ಕೊಡಕ್ಕಾಗಲ್ಲ. ಪ್ರತಿಯೊಬ್ಬರಿಗೂ ಉತ್ತರ ಕೊಟ್ಟರೆ ಕೊನೆ ಇರೋದಿಲ್ಲ ಎಂದರು.