Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಅಮಿತ್ ಶಾ ದಿಲ್ಲಿಗೆ ಕರೆಸಿ ಭೇಟಿಯಾಗದೆ ಕಳಿಸಿದರು – ಕೆ.ಎಸ್‌. ಈಶ್ವರಪ್ಪ ಅಸಮಾಧಾನ

ನವದೆಹಲಿ: ಬಿಜೆಪಿ ಹಿರಿಯ ನಾಯಕ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ನನ್ನ ದೆಹಲಿಗೆ ಕರೆಸಿ ಭೇಟಿಯಾಗದೆ ಕಳಿಸಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅಸಮಾಧಾನ ಹೊರ ಹಾಕಿದ್ದಾರೆ.

ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೆ.ಎಸ್ ಈಶ್ವರಪ್ಪ ಅವರು, ‘ಅಮಿತ್‌ ಶಾ ಅವರ ಸೂಚನೆಯಂತೆ ನಾನು ದೆಹಲಿಗೆ ಬಂದೆ. ಇಲ್ಲಿಗೆ ಬಂದ ಬಳಿಕ ಅವರು ಸಿಗಲ್ಲ ಎಂಬ ಮಾಹಿತಿ ಗೃಹ ಸಚಿವರ ಕಚೇರಿಯಿಂದ ಬಂತು. ಹಾಗಿದ್ದರೆ ನಾನು ಬೆಂಗಳೂರಿಗೆ ಹೊರಡಲಾ ಎಂದು ಕೇಳಿದಾಗ, ಸರಿ ಹೊರಡಿ ಎಂಬ ಉತ್ತರ ಬಂತು. ಇದರರ್ಥ ಈಶ್ವರಪ್ಪ ಬಂಡಾಯ ಅಭ್ಯರ್ಥಿಯಾಗಿ ನಿಲ್ಲಲಿ ಎಂಬುದು ಅಮಿತ್‌ ಶಾ ಅಪೇಕ್ಷೆಯೂ ಇದ್ದಂತಿದೆ.

ನಾನು ಬಂಡಾಯ ಅಭ್ಯರ್ಥಿಯಾಗಿ ನಿಂತು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರ ಆಶೀರ್ವಾದ, ಎಲ್ಲರ ಸಹಕಾರದಿಂದ ಗೆದ್ದೇ ಗೆಲ್ಲುತ್ತೇನೆ. ಗೆದ್ದ ನಂತರ ಮೋದಿ ಕೈ ಬಲಪಡಿಸುತ್ತೇನೆ ಎಂದು ತಿಳಿಸಿದರು. ಈ ಹಿಂದೆ ನಾನು ರಾಯಣ್ಣ ಬ್ರಿಗೇಡ್ ಕಟ್ಟಿದಾಗ ಅಮಿತ್‌ ಶಾ ಅವರ ಮಾತು ಕೇಳಿ ಸಂಘಟನೆ ನಿಲ್ಲಿಸಿದೆ. ಕುಟುಂಬ ಸದಸ್ಯರ ಸ್ಪರ್ಧೆ ವಿಚಾರದಲ್ಲಿ ನಮ್ಮ ಕುಟುಂಬಕ್ಕೊಂದು ನೀತಿ, ಬೇರೆಯವರ ಕುಟುಂಬಕ್ಕೊಂದು ನೀತಿ ಯಾಕೆ? ಹೀಗಾಗಿ ನಾನು ಈ ಬಾರಿ ಚುನಾವಣೆಗೆ ನಿಂತೇ ನಿಲ್ಲುತ್ತೇನೆ.

ಯಾವುದೇ ಕಾರಣಕ್ಕೂ ನನ್ನ ನಿರ್ಧಾರದಿಂದ ಹಿಂದೆ ಸರಿಯಲ್ಲ ಎಂದರು. ಮಂಗಳವಾರ ಬೆಂಗಳೂರಿಗೆ ಬಂದಿದ್ದ ಅಮಿತ್ ಶಾ ಅವರು ದೂರವಾಣಿ ಮೂಲಕ ಈಶ್ವರಪ್ಪ ಅವರನ್ನು ಸಂಪರ್ಕಿಸಿ ಬುಧವಾರ ದೆಹಲಿಗೆ ಬರುವಂತೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಈಶ್ವರಪ್ಪ ಅವರು ಬುಧವಾರ ರಾತ್ರಿ ದೆಹಲಿಗೆ ತಲುಪಿದರು. ಈ ಮಧ್ಯೆ ಈಶ್ವರಪ್ಪ ಅವರು, ಬಿಜೆಪಿ ರಾಜ್ಯಾಧ್ಯಕ್ಷರನ್ನು ಬದಲಾಯಿಸಿದರೆ ಮಾತ್ರ ನಾನು ಸ್ಪರ್ಧಿಸುವುದಿಲ್ಲ ಎಂಬುದಾಗಿ ದೆಹಲಿಯಲ್ಲಿ ಹೇಳಿ ಬರುತ್ತೇನೆ ಎಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದರು. ಬಹುಶಃ ಈ ಹೇಳಿಕೆ ಹಿನ್ನೆಲೆಯಲ್ಲಿ ಭೇಟಿ ರದ್ದಾಗಿದೆ ಎನ್ನಲಾಗುತ್ತಿದೆ. ಹೀಗಾಗಿ, ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಈಶ್ವರಪ್ಪ ಅವರು ಗುರುವಾರ ಬೆಳಗ್ಗೆ ವಾಪಸಾಗಲಿದ್ದಾರೆ.