Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಅಯೋಧ್ಯೆ ರಾಮ ಮಂದಿರಕ್ಕೆ ಬೃಹದಾಕಾರದ “ಅಳಿಲು ಪುತ್ಥಳಿ” ನೀಡುತ್ತಿರುವ ಬೆಂಗಳೂರಿನ ಕೈಗಾರಿಕೋದ್ಯಮಿ

ಬೆಂಗಳೂರು: ಅಯೋಧ್ಯೆ ರಾಮಮಂದಿರದ ಉದ್ಘಾಟನೆಗೆ ಇನ್ನು ಕೆಲವೇ ಕೆಲವು ದಿನಗಳು ಬಾಕಿ ಇದೆ. ಬೆಂಗಳೂರಿನ ನಾಗಸಂದ್ರದ ಕೈಗಾರಿಕೋದ್ಯಮಿಯೊಬ್ಬರು ನಿರ್ಮಿಸಿರುವ ಬೃಹದಾಕಾರದ ಅಳಿಲು ಪುತ್ಥಳಿ ಮೂರ್ತಿಯು ಶ್ರೀರಾಮನ ಜನ್ಮಭೂಮಿ ಅಯೋಧ್ಯೆಯ ನವ ನಿರ್ಮಾಣದ ವೇದಿಕೆಯಲ್ಲಿ ಸ್ಥಾಪಿತವಾಗಲಿದೆ.

ಬೆಂಗಳೂರಿನ ನಾಗಸಂದ್ರ ಮೆಟ್ರೋ ಬಳಿಯ ಪ್ರಸಿದ್ಧಿ ಇಂಜಿನಿಯರ್ಸ್ ಕಂಪೆನಿಯ ಮಾಲೀಕರಾದ ಸಿ ಪ್ರಕಾಶ್ ಅವರು ಎರಡೂವರೆ ಟನ್ ಕಾರ್ಟನ್ ಸ್ಟೀಲ್ ಬಳಸಿ, 15 ಅಡಿ ಎತ್ತರ ಹಾಗೂ 7.5 ಅಡಿ ಅಗಲ ವಿಸ್ತೀರ್ಣದಲ್ಲಿ ಶ್ರೀರಾಮನ ಸೇವೆ ಎಂದು ನಿರ್ಮಿಸಿರುವ ಬೃಹದಾಕಾರದ ಅಳಿಲು ಪುತ್ಥಳಿ ಅಯೋಧ್ಯೆಯ ರೈಲ್ವೆ ನಿಲ್ದಾಣ ಆವರಣದ ಮಧ್ಯ ಭಾಗದಲ್ಲಿ ಅನಾವರಣಗೊಳ್ಳಲಿದೆ.

ಡಿ.6ರಂದು ಬೃಹದಾಕಾರದ ಅಳಿಲು ಪುತ್ಥಳಿ ಹೊತ್ತ ಟ್ರಕ್ ರಸ್ತೆ ಮಾರ್ಗವಾಗಿ ಅಯೋಧ್ಯೆಯತ್ತ ತೆರಳಿತು.ಇದೇ 11 ನೇ ತಾರೀಖು ಅಯೋಧ್ಯೆಗೆ ತಲುಪಲಿದ್ದು, 12 ನೇ ತಾರೀಖು ಅಯೋಧ್ಯೆ ರೈಲ್ವೆ ನಿಲ್ದಾಣ ಆವರಣದಲ್ಲಿ ಅಳಿಲು ಪ್ರತಿಷ್ಠಾಪನೆಗೊಳ್ಳಲಿದೆ.

ಈ ಪುತ್ಥಳಿ ನಿರ್ಮಾಣಕ್ಕೆ ಕಾರ್ಟನ್ ಸ್ಟೀಲ್ ಬಳಸಿದ್ದು ಇದರಲ್ಲಿ ತಾಮ್ರದ ಮಿಶ್ರಣ ಇರುವುದರಿಂದ 100 ವರ್ಷಗಳಾದರೂ ಸಹ ಪುತ್ಥಳಿ ಯಾವುದೇ ರೀತಿ ಹಾಳಾಗಲು ಸಾಧ್ಯವಿಲ್ಲ. ಜೊತೆಗೆ ನಿರ್ವಹಣೆಗೆ ಯಾವುದೇ ವೆಚ್ಚ ತಗುಲುವುದಿಲ್ಲ ಎಂದು ಪುತ್ಥಳಿ ನಿರ್ಮಾಣ ಇಂಜಿನಿಯರ್ ಧನುಶ್ರೀ ತಿಳಿಸಿದ್ದಾರೆ.