Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಆಝಾನ್ ನಿಂದ ಶಬ್ದ ಮಾಲಿನ್ಯ ಉಂಟಾಗದು: ಬಜರಂಗದಳ ಮುಖಂಡನ ಅರ್ಜಿ ತಳ್ಳಿಹಾಕಿದ ಹೈಕೋರ್ಟ್

ಆಝಾನ್‌ಗಾಗಿ ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ಬಳಸುವುದರಿಂದ ಶಬ್ದ ಮಾಲಿನ್ಯ ಉಂಟಾಗುವುದಿಲ್ಲ ಎಂದು ಹೇಳಿರುವ ಗುಜರಾತ್ ಹೈಕೋರ್ಟ್ ಅವುಗಳ ಬಳಕೆಯನ್ನು ನಿಷೇಧಿಸುವಂತೆ ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ವಜಾಗೊಳಿಸಿದೆ.

ಸಂಪೂರ್ಣವಾಗಿ ತಪ್ಪಾಗಿ ಗ್ರಹಿಕೆ ಎಂದು ಅರ್ಜಿಯನ್ನು ತಳ್ಳಿ ಹಾಕಿದ ಗುಜರಾತ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸುನೀತಾ ಅಗರ್ವಾಲ್ ಮತ್ತು ನ್ಯಾಯಮೂರ್ತಿ ಅನಿರುದ್ಧ ಪಿ ಮಯೀ ಅವರನ್ನೊಳಗೊಂಡ ವಿಭಾಗೀಯ ಪೀಠವು, ಅನುಮತಿಸಲ್ಪಟ್ಟ ಡೆಸಿಬಲ್ ನಲ್ಲಿ ಮಾನವ ಧ್ವನಿ ಮೂಲಕ ಆಝಾನ್ ಕರೆಯುವುದು ಹೇಗೆ ಶಬ್ದ ಮಾಲಿನ್ಯ ಉಂಟು ಮಾಡುತ್ತದೆ ಎಂದು ಕೇಳಿದೆ.

ಬೆಳಿಗ್ಗೆ ಧ್ವನಿವರ್ಧಕದ ಮೂಲಕ ಆಝಾನ್ ಮಾಡುವ ಮಾನವ ಧ್ವನಿಯು ಶಬ್ದ ಮಾಲಿನ್ಯವನ್ನು ಉಂಟುಮಾಡುವ ಮಟ್ಟವನ್ನು ಹೇಗೆ ಸಾಧಿಸುತ್ತದೆ ಮತ್ತು ಇದು ಸಾರ್ವಜನಿಕರಿಗೆ ಆರೋಗ್ಯದ ಅಪಾಯವನ್ನು ಹೇಗೆ ಉಂಟುಮಾಡುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಾವು ವಿಫಲರಾಗಿದ್ದೇವೆ ಎಂದು ನ್ಯಾಯಾಲಯ ಹೇಳಿದೆ.

ಧ್ವನಿವರ್ಧಕಗಳ ಮೂಲಕ ಆಝಾನ್ ಕರೆಯುವುದರಿಂದ ಶಬ್ದ ಮಾಲಿನ್ಯ ಉಂಟಾಗುತ್ತದೆ ಮತ್ತು ಜನರ, ವಿಶೇಷವಾಗಿ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಮಸೀದಿಗಳ ಲೌಡ್ ಸ್ಪೀಕರ್ ಮೇಲಿನ ನಿರ್ಬಂಧಕ್ಕೆ ಕೋರಿ ಬಜರಂಗದಳದ ಮುಖಂಡ ಶಕ್ತಿಸಿಂಹ ಝಾಲಾ ಅವರು ಅರ್ಜಿ ಸಲ್ಲಿಸಿದ್ದರು.

“ನಿಮ್ಮ ದೇವಾಲಯದಲ್ಲಿ ಮುಂಜಾನೆ ಮೂರು ಗಂಟೆಗೆಲ್ಲ ತಬಲದೊಂದಿಗೆ ಬೆಳಗಿನ ಆರತಿ ಪ್ರಾರಂಭಗೊಳ್ಳುತ್ತದೆ. ಹಾಗಾದರೆ, ಇದು ಯಾರಿಗೂ ಯಾವುದೇ ಬಗೆಯ ಶಬ್ದವನ್ನು ಉಂಟುಮಾಡುವುದಿಲ್ಲವೆ? ಘಂಟೆ ಹಾಗೂ ಜಾಗಟೆಯ ಶಬ್ದ ದೇವಾಲಯದ ಆವರಣದಲ್ಲಿ ಮಾತ್ರ ಉಳಿಯುತ್ತದೆ ಎಂದು ನೀವು ಹೇಳಬಲ್ಲಿರಾ? ಅದು ದೇವಾಲಯದ ಹೊರಗೂ ಧ್ವನಿಸುವುದಿಲ್ಲವೆ?” ಎಂದು ವಿಚಾರಣೆಯ ಸಂದರ್ಭದಲ್ಲಿ ಅರ್ಜಿದಾರರನ್ನು ನ್ಯಾಯಾಲಯವು ಪ್ರಶ್ನಿಸಿತು.