Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಇಸ್ರೋ – ‘ಸ್ಪೇಸ್‌ಎಕ್ಸ್’ ಸಹಯೋಗ: ಫಾಲ್ಕನ್‌- 9 ರಾಕೆಟ್ ನಲ್ಲಿ ಜಿಸ್ಯಾಟ್‌-20 ಉಪಗ್ರಹ ಉಡಾವಣೆ

ನವದೆಹಲಿ:  ಭಾರತದ ಸಂಪರ್ಕ ಉಪಗ್ರಹವಾದ ಜಿಸ್ಯಾಟ್‌-20 ಉಪಗ್ರಹದ ಉಡಾವಣೆಗಾಗಿ ಇದೇ ಮೊದಲ ಬಾರಿಗೆ ಎಲೋನ್ ಮಸ್ಕ್‌ನ ಸ್ಪೇಸ್‌ಎಕ್ಸ್ ಫಾಲ್ಕನ್‌- 9 ರಾಕೆಟನ್ನು ಬಳಕೆ ಮಾಡಿಕೊಳ್ಳಲು ಇಸ್ರೋ ಒಪ್ಪಂದ ಮಾಡಿಕೊಂಡಿದೆ.

ಕಂಪನಿಯ ಫಾಲ್ಕನ್ 9 ರಾಕೆಟ್ GSAT N2 ಅನ್ನು ಭೂಮಿಯಿಂದ 37,000 ಕಿಮೀ ದೂರದಲ್ಲಿರುವ ಜಿಯೋ ಸಿಂಕ್ರೊನೈಸ್ಡ್ ಕಕ್ಷೆಗೆ ಉಡಾವಣೆ ಮಾಡಲಿದೆ. ಬಿಲಿಯನೇರ್ ಎಲೋನ್ ಮಸ್ಕ್ ನೇತೃತ್ವದ ಉದ್ಯಮದೊಂದಿಗೆ ಇದು ಭಾರತದ ಮೊದಲ ಪಾಲುದಾರಿಕೆಯಾಗಿದೆ.

230ಕ್ಕೂ ಹೆಚ್ಚು ಉಪಗ್ರಹಗಳನ್ನು ಯಶಸ್ವಿಯಾಗಿ ಭೂ ಸ್ಥಿರ ಕಕ್ಷೆಗೆ ತಲುಪಿಸಿರುವ ಫಾಲ್ಕನ್‌-9 ರಾಕೆಟ್‌ ಭಾರತದ ಉಪಗ್ರಹವನ್ನು ಹೊತ್ತು ಫ್ಲೋರಿಡಾದಿಂದ ಉಡಾವಣೆಯಾಗುವ ಸಾಧ್ಯತೆಗಳಿವೆ. ನಮಗೆ ಬೇಕಾದ ಸಮಯದಲ್ಲಿ ಇತರ ರಾಕೆಟ್‌ಗಳು ಲಭ್ಯವಿಲ್ಲದ ಕಾರಣ ಸ್ಪೇಸ್‌ಎಕ್ಸ್‌ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಇಸ್ರೋ ಮುಖ್ಯಸ್ಥ ಎಸ್‌.ಸೋಮನಾಥನ್‌ ಹೇಳಿದ್ದಾರೆ. ಇಸ್ರೋದಿಂದ ವಾಣಿಜ್ಯ ಉಡಾವಣೆಗಳನ್ನು ನಡೆಸುವ ನ್ಯೂ ಸ್ಪೇಸ್‌ ಇಂಡಿಯಾ ಲಿಮಿಟೆಡ್‌ ಸಂಸ್ಥೆ ಈ ಒಪ್ಪಂದ ಮಾಡಿಕೊಂಡಿದ್ದು, ಈ ವರ್ಷದ 2ನೇ ತ್ರೈಮಾಸಿಕದಲ್ಲಿ ಉಡಾವಣೆಯಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಈ ವರ್ಷದ ಏಪ್ರಿಲ್ ಮತ್ತು ಜೂನ್ ನಡುವೆ ಉಡಾವಣೆ ನಡೆಯಲಿದೆ. ಉಪಗ್ರಹ ಆಧಾರಿತ ಇಂಟರ್ನೆಟ್‌ ವ್ಯವಸ್ಥೆ ಜನಪ್ರಿಯವಾಗುತ್ತಿರುವ ಹೊತ್ತಿನಲ್ಲಿ ಭಾರತದ ಎಲ್ಲಾ ಪ್ರದೇಶಗಳನ್ನು ಒಳಗೊಳ್ಳುವಂತೆ ಮಾಡಲು ಇಸ್ರೋ ತಯಾರಿಸಿರುವ ಸಂಪರ್ಕ ಉಪಗ್ರಹವೇ ಜಿಸ್ಯಾಟ್‌-20. ಇದು ಸುಮಾರು 4700 ಕೇಜಿ ತೂಕವಿದ್ದು, ಸೆಕೆಂಡಿಗೆ 48 ಜಿಬಿಯಂತೆ ಇಂಟರ್ನೆಟ್‌ ಸೌಲಭ್ಯ ಒದಗಿಸಲಿದೆ.