Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಉಮ್ಲಿಂಗ್ ಲಾ ಪ್ರದೇಶ ತಲುಪಿದ ಸುಳ್ಯ ಬಾಲಕ.. ಮೂರುವರೆ ವರ್ಷದ ಜಝೀಲ್ ರೆಹ್ಮಾನ್​ನಿಂದ ವಿಶಿಷ್ಟ ಸಾಧನೆ…!

ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಉದ್ಯಮಿಯೊಬ್ಬರು ಪತ್ನಿ ಮತ್ತು ತಮ್ಮ ಮೂರುವರೆ ವರ್ಷದ ಮಗನೊಂದಿಗೆ ಸುಮಾರು 19,024 ಅಡಿ ಎತ್ತರದ ಉಮ್ಲಿಂಗ್ ಲಾ ಪ್ರದೇಶವನ್ನು ಬೈಕ್‌ನಲ್ಲಿ ತಲುಪಿದ್ದು, ಇದೀಗ ಸುಳ್ಯಕ್ಕೆ ವಾಪಸಾಗುತ್ತಿದ್ದಾರೆ.

ಸುಳ್ಯ ತಾಲೂಕಿನ ನಿವಾಸಿಯಾದ ಮತ್ತು ಇಲ್ಲಿನ ಹಳೆಗೇಟ್‌ ಎಂಬಲ್ಲಿರುವ ಹೋಮ್ ಗ್ಯಾಲರಿ ಮಾಲೀಕರಾದ ತೌಹೀದ್ ರೆಹ್ಮಾನ್ ಹಾಗೂ ಅವರ ಪತ್ನಿ ಜಶ್ಮಿಯಾ ಮತ್ತು ಮಗ ಜಝೀಲ್ ರೆಹ್ಮಾನ್ ಅವರು ತಮ್ಮ ಬುಲೆಟ್‌ ಬೈಕ್‌ನಲ್ಲಿ ಉಮ್ಮಿಂಗ್ ಲಾ ತಲುಪಿದ ದಂಪತಿ. ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್ (17,498) ಗಿಂತ ಎತ್ತರದ ಮತ್ತು ಪ್ರಸ್ತುತ ಆಮ್ಲಜನಕದ ಮಟ್ಟವು ಶೇ.43 ಮಾತ್ರ ಇರುವ, ಜತೆಗೆ ಮೈನಸ್ 2 ಡಿಗ್ರಿಗಿಂತಲೂ ಕಡಿಮೆ ಉಷ್ಣಾಂಶ ಇರುವ ಈ ಸ್ಥಳಕ್ಕೆ ತಲುಪಿದವರಲ್ಲಿ ಮೂರುವರೆ ವರ್ಷ ಪ್ರಾಯದ ಜಝೀಲ್ ರೆಹ್ಮಾನ್ ಬೈಕ್‌ನಲ್ಲಿ ತಲುಪಿದ ಅತ್ಯಂತ ಕಿರಿಯ ವ್ಯಕ್ತಿ ಎನಿಸಿಕೊಂಡಿದ್ದಾನೆ.

ಈ ದಾಖಲೆಯು ಇಂಡಿಯಾ ರೆಕಾರ್ಡ್ ಬುಕ್‌ನಲ್ಲಿ ಸೇರ್ಪಡೆಗೊಳ್ಳಲಿದೆ ಎಂದು ತಿಳಿದು ಬಂದಿದೆ. ವಿಶ್ವದಲ್ಲೇ ಅತಿ ಎತ್ತರದ ಮೋಟಾರು ರಸ್ತೆ ಭಾರತದಲ್ಲಿದೆ. ಪ್ರಸ್ತುತ ಈಗ ಇರುವ ಅತೀ ಎತ್ತರದ ಮೋಟಾರು ರಸ್ತೆ ಭಾರತದ ಲಡಾಖ್‌ನ ಮತ್ತು ಚೀನಾದ ಗಡಿಯಲ್ಲಿರುವ ಉಮ್ಲಿಂಗ್ ಲಾ ಪ್ರದೇಶ ಆಗಿದೆ. ಇದರ ಎತ್ತರವು ಸರಿಸುಮಾರು 19,024 ಅಡಿ ಆಗಿರುತ್ತದೆ. ಇದು 52 ಕಿಮೀ ದೂರದ ರಸ್ತೆಯಾಗಿದ್ದು, ಚಿಶುಮ್ಲೆಯನ್ನು ಡೆಮ್‌ಚೋಕ್‌ಗೆ ಸಂಪರ್ಕಿಸುತ್ತದೆ. ಇದು ಗಡಿ ನಿಯಂತ್ರಣ ರೇಖೆಯಲ್ಲಿದೆ. (ಎಲ್‌ಎಸಿ) ಭಾರತ ಮತ್ತು ಚೀನಾ ನಡುವಿನ ಘರ್ಷಣೆಯ ಪ್ರಮುಖ ಸ್ಥಳವೂ ಆಗಿದೆ.

ಉಮ್ಲಿಂಗ್ ಲಾ ಪ್ರದೇಶಕ್ಕೆ ತಲುಪಿದ ಸಂದರ್ಭದಲ್ಲಿ ಕ್ಲಿಕ್ಕಿಸಿಕೊಂಡ ಫೋಟೊ.

ಈ ಬಗ್ಗೆ ಈಟಿವಿ ಭಾರತದೊಂದಿಗೆ ಮಾತನಾಡಿದ ರೆಹ್ಮಾನ್ ಅವರು ನನಗೆ ಸಂಚಾರ ಎಂಬುದು ಪ್ರೀತಿಯ ಹವ್ಯಾಸವಾಗಿದೆ. ಈ ಹಿಂದೆ ಕಾರಿನಲ್ಲಿ ನಾನು ಸ್ನೇಹಿತರೊಂದಿಗೆ ಭಾರತಾದ್ಯಂತ ಎಲ್ಲಾ ಸ್ಥಳಗಳನ್ನು ಸುತ್ತಾಡಿದ್ದೇನೆ. ಲಡಾಖ್​ಗೇ ಸುಮಾರು 6 ಬಾರಿ ಬಂದಿದ್ದೇನೆ. ಉಮ್ಲಿಂಗ್ ಲಾಕ್ಕೆ ಇದೇ ಮೊದಲು ಪತ್ನಿ ಮತ್ತು ಮಗನೊಂದಿಗೆ ಬಾರಿ ಬೈಕ್‌ನಲ್ಲಿ ಬಂದಿದ್ದೇನೆ. ಆಗಸ್ಟ್ 15ರಂದು ನಾವು ಸುಳ್ಯದಿಂದ ಹೊರಟು 24 ದಿನಗಳ ಪ್ರಯಾಣ ಮುಗಿಸಿ ಇದೀಗ ಊರಿನ ಕಡೆಗೆ ವಾಪಸು ಹೊರಟಿದ್ದೇವೆ.

19 ದಿನಗಳಲ್ಲಿ ಸುಮಾರು 5 ಸಾವಿರ ಕಿ.ಮೀ ಸಂಚರಿಸಿ ನಾವು ಉಮ್ಲಿಂಗ್ ಲಾ ತಲುಪಿದ್ದೇವೆ. ಕಳೆದ ಶನಿವಾರ ಇಲ್ಲಿ ನಾವು ನಮ್ಮ ರಾಷ್ಟ್ರಧ್ವಜ, ಕನ್ನಡ ಧ್ವಜ ಮತ್ತು ನಮ್ಮ ತುಳುನಾಡಿನ ಬಾವುಟವನ್ನೂ ಇಲ್ಲಿ ಹಾರಿಸಿದ್ದೇವೆ. ಮೊದಲು ಇಲ್ಲಿ ಬಂದಾಗ ಆಮ್ಲಜನಕ ಕೊರತೆ ಎದುರಾಗಿ ಮಗನಿಗೆ ಸ್ವಲ್ಪ ಸಮಸ್ಯೆಯಾದರೂ ತಕ್ಷಣವೇ ಆತ ಈ ಪ್ರದೇಶಕ್ಕೆ ಹೊಂದಿಕೊಂಡಿದ್ದಾನೆ. ನಮ್ಮ ಸಂಚಾರದ ಪ್ರತಿಯೊಂದು ಘಟ್ಟದಲ್ಲೂ ವೈದ್ಯಕೀಯ ತಜ್ಞರ ನೆರವು ಪಡೆದೇ ಪ್ರಯಾಣ ಮುಂದುವರೆಸಿದ್ದೇವೆ.

ಕರ್ನಾಟಕದ ಬಾವುಟದೊಂದಿಗೆ ತೌಹೀದ್ ರೆಹ್ಮಾನ್ ,ಪತ್ನಿ, ಮಗ

ಊರಿನಲ್ಲಿ ಸಿಗುವ ಆಹಾರ ಇಲ್ಲಿ ಸಿಗದೇ, ಆಹಾರ ವ್ಯವಸ್ಥೆಯಲ್ಲಿ ಸ್ವಲ್ಪ ಸಮಸ್ಯೆಯಾದದ್ದು ಬಿಟ್ಟರೆ ಮಗನಿಗೆ ಏನೂ ತೊಂದರೆ ಅನಿಸಲಿಲ್ಲ. ಮಗ ಮತ್ತು ಪತ್ನಿ ತುಂಬಾ ಸಂತೋಷವಾಗಿದ್ದಾರೆ. ದಿನನಿತ್ಯ ನಾವು ಸುಮಾರು 300 ರಿಂದ 350ಕಿ.ಮೀ ಪ್ರಯಾಣ ಕೈಗೊಳ್ಳುತ್ತೇವೆ. ರಸ್ತೆ ಚೆನ್ನಾಗಿದ್ದರೆ 400 ಕಿ.ಮೀ ತನಕ ಸಂಚರಿಸುತ್ತೇವೆ. ನಾವು ಉಮ್ಮಿಂಗ್ ಲಾ ತಲುಪಿದ ತಕ್ಷಣವೇ ಭಾರತೀಯ ಸೇನೆಯ ಅಧಿಕಾರಿಗಳು, ಸಿಬ್ಬಂದಿಗಳು ನಮ್ಮನ್ನು ಸ್ವಾಗತಿಸಿದರು ಮತ್ತು ಅಭಿನಂದಿಸಿದರು.

ಉಮ್ಲಿಂಗ್ ಲಾ ತಲುಪಿದ ಅತ್ಯಂತ ಕಿರಿಯ ಎಂಬ ದಾಖಲೆಯನ್ನು ಐದು ವರ್ಷದ ಹರಿಯಾಣದ ಗುರುಗ್ರಾಮ್‌ನ ಧೀಮಹಿ ಪರಾಟೆ ಎಂಬ ಬಾಲಕಿ ಅವರು ತಮ್ಮ ಹೆತ್ತವರೊಂದಿಗೆ ಪಡೆದಿದ್ದರು. ಅವರು ಆಗಸ್ಟ್ 12, 2022 ರಂದು ಗುರುಗ್ರಾಮ್‌ನಿಂದ ತಮ್ಮ ಪೋಷಕರೊಂದಿಗೆ ಕಾರಿನಲ್ಲಿ ಪ್ರಯಾಣ ಮಾಡಿ ಇಲ್ಲಿಗೆ ತಲುಪಿದ್ದು ದಾಖಲೆಯಾಗಿತ್ತು. ಪ್ರಸ್ತುತ ಈ ದಾಖಲೆಯನ್ನು ತಮ್ಮ ಮೂರುವರೆ ವರ್ಷದ ಮಗನೊಂದಿಗೆ ಸಂಚರಿಸಿ ರೆಹ್ಮಾನ್ ದಂಪತಿ ಮುರಿದಿದ್ದಾರೆ.