Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಎಲೆಕ್ಟ್ರಾನಿಕ್ ಫ್ಯೂಸ್ ಗಳ ಖರೀದಿ: ಬಿಇಎಲ್ ಜೊತೆ ರಕ್ಷಣಾ ಸಚಿವಾಲಯ ಒಪ್ಪಂದ

ನವದೆಹಲಿ: ಭಾರತೀಯ ರಕ್ಷಣಾ ಸಚಿವಾಲಯವು ನಮ್ಮ ಸೇನೆಗೆ ಎಲೆಕ್ಟ್ರಾನಿಕ್ ಫ್ಯೂಸ್ ಗಳನ್ನು ಖರೀದಿ ಮಾಡುವುದಕ್ಕೆ ಸಂಬಂಧಿಸಿದಂತೆ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್)ನೊಂದಿಗೆ ಒಪ್ಪಂದಕ್ಕೆ ಇಂದು ಸಹಿ ಹಾಕಿದೆ.

ಈ ಕುರಿತು ಮಾಹಿತಿ ನೀಡಿದ ರಕ್ಷಣಾ ಸಚಿವಾಲಯವು 5,300 ಕೋಟಿ ರೂ. ವೆಚ್ಚದಲ್ಲಿ ಎಲೆಕ್ಟ್ರಾನಿಕ್ ಫ್ಯೂಸ್ ಗಳನ್ನು ಖರೀದಿಸಲಾಗುತ್ತದೆ. ಮದ್ದುಗುಂಡುಗಳ ಆಮದು ತಗ್ಗಿಸುವುದು ಮತ್ತು ಭಾರತೀಯ ಸೇನೆಯಲ್ಲಿ ಒಟ್ಟಾರೆ ಶಸ್ತ್ರಾಸ್ತ್ರಗಳ ದಾಸ್ತಾನು ಹೆಚ್ಚಿಸುವುದರ ಉದ್ದೇಶದಿಂದ ಬಿಇಎಲ್ ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ತಿಳಿಸಲಾಗಿದೆ.

ಬಿಇಎಲ್ ಪುಣೆ ಘಟಕದಿಂದ ಈ ಸಾಧನಗಳನ್ನು ಖರೀದಿ ಮಾಡಲಾಗುತ್ತದೆ. ಮುಂದಿನ 10 ವರ್ಷಗಳ ತನಕ ಬಿಇಎಲ್ ಇವುಗಳನ್ನು ಪೂರೈಕೆ ಮಾಡಲಿದೆ. ಈ ಸಲುವಾಗಿ ಐತಿಹಾಸಿಕ ಒಪ್ಪಂದಕ್ಕೆ ಇಂದು ಸಹಿ ಹಾಕಲಾಗಿದೆ. ಬಿಇಎಲ್ ಪುಣೆ ಹಾಗೂ ನಾಗ್ಪುರ ಘಟಕಗಳಲ್ಲಿ ಆತ್ಮನಿರ್ಭರ ಭಾರತ ಭಾಗವಾಗಿ ಈ ಫ್ಯೂಸ್ ಗಳನ್ನು ಉತ್ಪಾದಿಸಲಾಗುತ್ತದೆ. ಇದರಿಂದ ಒಂದೂವರೆ ಲಕ್ಷ ಕೆಲಸದ ದಿನಗಳಷ್ಟು ಉದ್ಯೋಗ ಸೃಷ್ಟಿಯಾಗಲಿದ್ದು, ದೇಶದ ಹಲವು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೂ ಉತ್ತೇಜನ ಸಿಗಲಿದೆ ಎಂದು ರಕ್ಷಣಾ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.