Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

‘ಒಂದು ಧರ್ಮ , ಒಂದು ಜಾತಿಯ ಪರವಾಗಿರಲು ನಾವು ಬಿಜೆಪಿ ಅಲ್ಲ’ -ಸಿಎಂ

ರಾಯಚೂರು: ಕಾಂಗ್ರೆಸ್ ಪಕ್ಷ ಜಾತ್ಯಾತೀತ ತತ್ವದಲ್ಲಿ ನಂಬಿಕೆ ಇಟ್ಟಿದ್ದು, ಒಂದು ಧರ್ಮ , ಒಂದು ಜಾತಿಯ ಪರವಾಗಿರಲು ನಾವು ಬಿಜೆಪಿ ಅಲ್ಲ. ನಾವು ಎಲ್ಲಾ ಧರ್ಮ, ಎಲ್ಲಾ ಜಾತಿಯವರ ಪರವಾಗಿ ಇರುವವರು ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಇಂದು ಮಾಧ್ಯಮದವರೊಂದಿಗೆ ಅವರು ಮಾತನಾಡಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಸಮಾಜ ವಿಭಜನಾ ಹೇಳಿಕೆಗೆ ಉತ್ತರಿಸಿ, ಸಮಾಜದಲ್ಲಿನ ಎಲ್ಲಾ ಜಾತಿ, ಧರ್ಮದ ಪರವಾಗಿ ನಾವಿದ್ದೇವೆ. ಕೇವಲ ಒಂದು ಜಾತಿ, ಧರ್ಮದ ಪರವಾಗಿರಲು ನಾವು ಬಿಜೆಪಿ ಅಲ್ಲ. ಧರ್ಮದ ಆಧಾರದ ಮೇಲೆ ಸಮಜವನ್ನು ಒಡೆಯುವವರಲ್ಲ. ನಾವು ಜಾತ್ಯಾತೀತ ತತ್ವ ಹಾಗೂ ಧರ್ಮನಿರಪೇಕ್ಷತೆಯಲ್ಲಿ ನಂಬಿಕೆಯುಳ್ಳವರು. ಕಾಂಗ್ರೆಸ್ ಜಾತ್ಯಾತೀತ ಪಕ್ಷ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ ನಮ್ಮದು ಎಂದರು.

 ಮೈಸೂರು ಲೋಕಸಭಾ ಕ್ಷೇತ್ರ ದಿಂದ ಯತೀಂದ್ರ ಸ್ಪರ್ಧೆ: ಊಹಾಪೋಹ

ಲೋಕಸಭಾ ಚುನಾವಣೆಯಲ್ಲಿ ಮೈಸೂರು ಕ್ಷೇತ್ರದಿಂದ ಮಾಜಿ ಶಾಸಕ ಯತೀಂದ್ರ ಅವರನ್ನು ಕಣಕ್ಕಿಳಿಸಿದರೆ ಸ್ವಾಗತಿಸುವುದಾಗಿ ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿರುವ ಬಗ್ಗೆ ಮಾತನಾಡಿ ನಾನಾಗಲಿ, ಯತೀಂದ್ರ ಆಗಲಿ ಈ ರೀತಿ ಹೇಳಿಲ್ಲ. ಪ್ರತಾಪ್ ಸಿಂಹ ಅವರಿಗೆ ಸೋಲುತ್ತೇನೆ ಎಂದು ಹೆದರಿಕೆ ಶುರುವಾಗಿದೆ ಹಾಗಾಗಿ ಏನೇನೋ ಹೇಳಿಕೆ ನೀಡುತ್ತಾರೆ. ಸುಮ್ಮನೆ ಊಹಾಪೋಹಗಳು ಅಷ್ಟೇ ಎಂದರು.

ನಗರಾಭಿವೃದ್ಧಿ ಸಚಿವ ಚುನಾವಣಾ ವೀಕ್ಷಕರಾಗಿ ಹೋಗಿದ್ದರು. ಅವರು ನೀಡಿರುವ ವರದಿ ಆಧಾರದ ಮೇಲೆ ನಾವು ನಿರ್ಧಾರ ಕೈಗೊಳ್ಳುತ್ತೇವೆ ಎಂದರು.

ಅಯೋಧ್ಯೆಗೆ ಹೋಗುತ್ತೇನೆ ಅಥವಾ ಹೋಗುವುದಿಲ್ಲ ಎಂದು ಹೇಳಿಲ್ಲ:

ರಾಮಮಂದಿರ ಉದ್ಘಾಟನೆಗೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಅವರ ನಿಲುವಿಗೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅಯೋಧ್ಯೆ ಗೆ 22 ರ ನಂತರ ತೆರಳುವುದಾಗಿ ಹೇಳಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿ ನಾನು ಹೋಗಲ್ಲ ಎಂದು ಎಲ್ಲಿಯೂ ಹೇಳಿಲ್ಲ. ಬಿಜೆಪಿ ಯವರು ರಾಜಕೀಯ ಮಾಡುತ್ತಿದ್ದಾರೆ. ಅಯೋಧ್ಯೆಯಲ್ಲಿ ಶ್ರೀ ರಾಮಚಂದ್ರನ ಪ್ರತಿಮೆ ಸ್ಥಾಪನೆಗೆ ನಮ್ಮದೇನೂ ವಿರೋಧವಿಲ್ಲ. ಆದರೆ ರಾಜಕೀಯ ಮಾಡಬಾರದು. 22 ರಂದು ರಾಜಕೀಯವಾಗಿ ಉದ್ಘಾಟನಾ ಸಭೆಯನ್ನು ಬಳಸಲು ಹೊರಟಿದ್ದಾರೆ. ಅದನ್ನು ನಾವು ವಿರೋಧಿಸುತ್ತೇವೆಯೇ ಹೊರತು ಶ್ರೀ ರಾಮಚಂದ್ರನ ವಿರೋಧಿಗಳಲ್ಲ. ನಾನು ಎಲ್ಲಿಯೂ ಅಯೋಧ್ಯೆಗೆ ಹೋಗುತ್ತೇನೆ ಅಥವಾ ಹೋಗುವುದಿಲ್ಲ ಎಂದು ಹೇಳಿಲ್ಲ ಎಂದರು.

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಗೃಹ ಲಕ್ಷ್ಮೀ ಯೋಜನೆಯಡಿ ಕೊಡುವ 2000 ರೂ.ಯಾವುದಕ್ಕೂ ಸಾಲುವುದಿಲ್ಲ ಎಂದಿರುವ ಬಗ್ಗೆ ಮಾತನಾಡಿ ಅವರು ನೂರು ರೂ.ಗಳನ್ನಾದರೂ ಕೊಟ್ಟಿದ್ದರೆ ಎಂದರು.