Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಕನ್ನಡ ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ ಎಂದ ಹೈಕೋರ್ಟ್‌

ಬೆಂಗಳೂರು: ನಾಮಫ‌ಲಕಗಳಲ್ಲಿ ಶೇ.60ರಷ್ಟು ಕನ್ನಡ ಬಳಕೆ ಮಾಡದ ವಾಣಿಜ್ಯ ಸಂಸ್ಥೆಗಳ ವಿರುದ್ಧ ಬಲವಂತದ ಕ್ರಮ ಜರಗಿಸಬಾರದು ಎಂದು ಹೈಕೋರ್ಟ್‌ ಮಧ್ಯಾಂತರ ಆದೇಶ ನೀಡಿದೆ. ಇದೇ ವೇಳೆ, “ಕನ್ನಡ ನಾಮಫ‌ಲಕ ಹಾಕಲು ನಿಮಗೇನು ತೊಂದರೆ’ ಎಂದೂ ಹೈಕೋರ್ಟ್‌ ಮೆಟ್ಟಿಲೇರಿರುವ ಖಾಸಗಿ ವಾಣಿಜ್ಯ ಸಂಸ್ಥೆಗಳನ್ನು ನ್ಯಾಯಾಲಯ ಪ್ರಶ್ನಿಸಿದೆ.ರಾಜ್ಯದ ವಾಣಿಜ್ಯ ಸಂಸ್ಥೆಗಳ ನಾಮಫ‌ಲಕಗಳಲ್ಲಿ ಶೇ.60ರಷ್ಟು ಕನ್ನಡ ಬಳಸುವುದನ್ನು ಕಡ್ಡಾಯ ಗೊಳಿಸಿ ಜಾರಿಗೊಳಿಸಿರುವ ಕನ್ನಡ ಭಾಷೆ ಸಮಗ್ರ ಅಭಿವೃದ್ಧಿ ಕಾಯ್ದೆ-2022 ಮತ್ತು ಶೇ.60ರಷ್ಟು ಕನ್ನಡ ಬಳಸದ ಸಂಸ್ಥೆಗಳನ್ನು ಮುಚ್ಚುವುದಾಗಿ ತಿಳಿಸಿ 2024ರ ಫೆ.28ರಂದು ಹೊರಡಿಸಿರುವ ಸುತ್ತೋಲೆಯನ್ನು ಪ್ರಶ್ನಿಸಿ ರಿಟೇಲರ್ಸ್‌ ಅಸೋಸಿಯೇಶನ್‌ ಆಫ್ ಇಂಡಿಯಾ, ಟೈಟಾನ್‌ ಕಂಪೆನಿ ಲಿಮಿಟೆಡ್‌, ಮತ್ತು ಪಿವಿಆರ್‌ ಐನಾಕ್ಸ್‌ ಲಿಮಿಟೆಡ್‌ ಮತ್ತಿತರ ಬೃಹತ್‌ ವಾಣಿಜ್ಯ ಸಂಸ್ಥೆಗಳು ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿವೆ.ಸೋಮವಾರ ಅರ್ಜಿ ವಿಚಾರಣೆ ನಡೆಸಿದ ನ್ಯಾ| ಎಂ. ನಾಗಪ್ರಸನ್ನ ಅವರಿದ್ದ ಏಕಸಸದಸ್ಯ ನ್ಯಾಯಪೀಠ, ನಾಮಫಲಕದಲ್ಲಿ ಶೇ.60ರಷ್ಟು ಕನ್ನಡ ಕಡ್ಡಾಯ ಬಳಕೆ ಮಾಡದ ವಾಣಿಜ್ಯ ಸಂಸ್ಥೆಗಳು, ಅಂಗಡಿ-ಮುಂಗಟ್ಟುಗಳನ್ನು ಮುಚ್ಚದಂತೆ ಮಧ್ಯಾಂತರ ಆದೇಶ ನೀಡಿ ವಿಚಾರಣೆಯನ್ನು ಮಾ.22ಕ್ಕೆ ಮುಂದೂಡಿತು.
ಅಲ್ಲದೆ, ಕನ್ನಡ ಭಾಷೆ ಸಮಗ್ರ ಅಭಿವೃದ್ಧಿ ಕಾಯ್ದೆ-2022 ಅನ್ನು ಯಾವ ದಿನದಿಂದ ಜಾರಿ ಮಾಡಲಾಗಿದೆ ಎಂಬ ಬಗ್ಗೆ ಗೆಜೆಟ್‌ ಅಧಿಸೂಚನೆಯಲ್ಲಿ ಸ್ಪಷ್ಟವಾಗಿ ತಿಳಿಸಿಲ್ಲ. ಆ ಕುರಿತು ಸರಕಾರ ಮಾಹಿತಿ ನೀಡಬೇಕು. ಅರ್ಜಿಗೆ ಆಕ್ಷೇಪಣೆ ಸಲ್ಲಿಸಬೇಕು. ಶೇ.60ರಷ್ಟು ಕನ್ನಡ ಬಳಕೆ ಮಾಡಲು ವಾಣಿಜ್ಯ ಸಂಸ್ಥೆಗಳಿಗೆ ಎಷ್ಟು ದಿನ ಕಾಲಾವಕಾಶ ನೀಡಲಾಗುತ್ತದೆ ಎಂಬ ಬಗ್ಗೆ ವಿವರಣೆ ನೀಡಬೇಕು ಎಂದು ಇದೇ ವೇಳೆ ರಾಜ್ಯ ಸರಕಾರಕ್ಕೆ ನ್ಯಾಯಪೀಠ ಸೂಚಿಸಿದೆ.

 

 

ಕೋರ್ಟ್‌ ಹೇಳಿದ್ದೇನು?
ನಾಮಫ‌ಲಕಗಳಲ್ಲಿ ಶೇ.60ರಷ್ಟು ಕನ್ನಡ ಬಳಕೆ ಮಾಡದ ವಾಣಿಜ್ಯ ಸಂಸ್ಥೆಗಳನ್ನು ಮುಚ್ಚುವುದಾಗಿ ಸರಕಾರ ಹೇಳಿರುವುದು ಕಠಿನ ಕ್ರಮವಾಗಲಿದೆ. ದಂಡ ಹಾಕುವುದು ಅಥವಾ ಪರವಾನಿಗೆ ರದ್ದುಪಡಿಸುವ ಕ್ರಮವಾದರೆ ಸರಿ. ಆದರೆ ಸಂಸ್ಥೆಯನ್ನೇ ಮುಚ್ಚುವುದು ಸರಿಯಾದ ಕ್ರಮವಲ್ಲ. ಮೇಲಾಗಿ ಕಾಯ್ದೆ ನಿಯಮಗಳನ್ನು ಸುತ್ತೋಲೆ ಮೂಲಕ ಜಾರಿಗೊಳಿಸಲು ಸಾಧ್ಯವಿಲ್ಲ. ಆದ್ದರಿಂದ ನಾಮಫ‌ಲಕದಲ್ಲಿ ಶೇ.60ರಷ್ಟು ಕನ್ನಡ ಬಳಕೆ ಮಾಡದ ವಾಣಿಜ್ಯ ಸಂಸ್ಥೆಗಳನ್ನು ಮುಚ್ಚುವ (ಸೀಲ್‌ ಡೌನ್‌) ಬಲವಂತದ ಕ್ರಮ ಜರಗಿಸಬಾರದು. ಉಳಿದಂತೆ ಸುತ್ತೋಲೆಯಲ್ಲಿ ಉÇÉೇಖೀಸಿರುವ ಇತರೆ ಅಂಶಗಳು ಅರ್ಜಿ ಕುರಿತ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದು ನ್ಯಾಯಪೀಠ ಮಧ್ಯಾಂತರ ಆದೇಶದಲ್ಲಿ ತಿಳಿಸಿದೆ.