Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಕರ್ನಾಟಕದಲ್ಲಿ ‘ಕಮಲ’ಕ್ಕೆ ಹೆಚ್ಚಿನ ಬಲ – ಕಾಂಗ್ರೆಸ್‌ಗೆ ನಿರಾಸೆ ತಂದ ಮತ್ತೊಂದು ಸಮೀಕ್ಷೆ

ಬೆಂಗಳೂರು: 2024ರ ಲೋಕಸಭಾ ಚುನಾವಣೆಗೆ ಬಿಜೆಪಿ, ಕಾಂಗ್ರೆಸ್‌ ಸೇರಿದಂತೆ ವಿವಿಧ ಪಕ್ಷಗಳು ಭರ್ಜರಿ ತಯಾರಿ ನಡೆಸಿವೆ. ಈ ಮಧ್ಯೆ ಚುನಾವಣಾ ಪೂರ್ವ ಬಿಡುಗಡೆಯಾದ ಮತ್ತೊಂದು ಸಮೀಕ್ಷೆಯು ಕಾಂಗ್ರೆಸ್‌ಗೆ ನಿರಾಸೆ ಉಂಟು ಮಾಡಿದೆ.

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್‌ ಪಕ್ಷವು ಲೋಕಸಭಾ ಚುನಾವಣೆಗೆ ಸಿದ್ಧತೆ ನಡೆಸಿದೆ. ಆದರೆ ಕಾಂಗ್ರೆಸ್‌ ಹೀನಾಯ ಸೋಲು ಕಾಣುವ ಸಾಧ್ಯತೆ ಇದೆ ಎಂದು ಸಮೀಕ್ಷೆಗಳು ಹೇಳುತ್ತಿವೆ.

ಕಳೆದ ವಾರ ಬಿಡುಗಡೆಯಾಗಿದ್ದ ಜೀ ನ್ಯೂಸ್- ಮೆಟ್ರಿಕ್ಸ್ ಚುನಾವಣಾ ಪೂರ್ವ ಸಮೀಕ್ಷೆ ಕೂಡ ಬಿಜೆಪಿಯೇ ಹೆಚ್ಚು ಸ್ಥಾನ ಗಳಿಸಲಿದೆ ಎಂದು ಹೇಳಿತ್ತು. ಸಮೀಕ್ಷೆಯ ವರದಿ ಪ್ರಕಾರ ಬಿಜೆಪಿ ಮೈತ್ರಿಕೂಟ 23 ಮತ್ತು ಆಡಳಿತ ಪಕ್ಷ ಕಾಂಗ್ರೆಸ್ 5 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಇದರ ಬೆನ್ನಲ್ಲೆ ಬಿಡುಗಡೆಯಾಗಿರುವ ಇಂಡಿಯಾ ಟಿವಿ-ಸಿಎನ್‌ಎಕ್ಸ್ ಸಮೀಕ್ಷೆ ಕೂಡ ಕಾಂಗ್ರೆಸ್‌ಗೆ ನಿರಾಸೆ ತಂದಿದೆ. ಇಂಡಿಯಾ ಟಿವಿ-ಸಿಎನ್‌ಎಕ್ಸ್ ಅಭಿಪ್ರಾಯ ಸಂಗ್ರಹ2024 ರ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದ 28 ಕ್ಷೇತ್ರಗಳ ಪೈಕಿ ಬಿಜೆಪಿ 22 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ ಮತ್ತು ಅದರ ಮಿತ್ರ ಪಕ್ಷ ಜೆಡಿಎಸ್ 2 ಸ್ಥಾನಗಳನ್ನು ಗೆಲ್ಲಬಹುದು ಎಂದು ಇಂಡಿಯಾ ಟಿವಿ-ಸಿಎನ್‌ಎಕ್ಸ್ ಅಭಿಪ್ರಾಯ ಸಂಗ್ರಹ ಸೋಮವಾರ (ಮಾರ್ಚ್ 4) ಭವಿಷ್ಯ ನುಡಿದಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 25 ಸ್ಥಾನಗಳನ್ನು ಗೆದ್ದಿತ್ತು. ಇತ್ತ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 22ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದ್ದಾರೆ.