Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಕೇವಲ 6 ಪ್ರಯಾಣಿಕರಿಗಾಗಿ ವಿಮಾನ ಹಾರಿಸಲು ಇಂಡಿಗೋ ಸಂಸ್ಥೆ ನಿರಾಕರಣೆ – ವಿಮಾನ ನಿಲ್ದಾಣದಲ್ಲೇ ರಾತ್ರಿ ವಾಸ್ತವ್ಯ

ಬೆಂಗಳೂರು : ಇಂಡಿಗೋ ವಿಮಾನಯಾನ ಸಂಸ್ಥೆ ವಿರುದ್ಧ ಆರೋಪವೊಂದು ಕೇಳಿ ಬಂದಿದೆ. ಕೇವಲ ಆರು ಪ್ರಯಾಣಿಕರಿಗಾಗಿ ತಮ್ಮ ವಿಮಾನವನ್ನು ಹಾರಿಸಲು ನಿರಾಕರಿಸಲಾಗಿದೆ ಎಂದು ಹೇಳಲಾಗಿದೆ. ಬೆಂಗಳೂರಿನಿಂದ ಚೆನ್ನೈಗೆ ತೆರಳಲು ಕೇವಲ ಪ್ರಯಾಣಿಕರು ಇದ್ದಿದ್ದರಿಂದ ಇಂಡಿಗೋ ವಿಮಾನಯಾನ ಸಂಸ್ಥೆ ವಿಮಾನ ಹಾರಿಸಲು ನಿರಾಕರಣೆ ಮಾಡಿದೆ ಎನ್ನಲಾಗಿದೆ. ಚೆನ್ನೈಗೆ ತೆರಳಲು ಬೇರೆ ವಿಮಾನದಲ್ಲಿ ಕಳಿಸುವ ಭರವಸೆ ನೀಡಿ ನಮ್ಮನ್ನು ವಿಮಾನದಿಂದ ಕೆಳಗಿಳಿಸಲಾಯಿತು ಎಂದು ಪ್ರಯಾಣಿಕರು ಆರೋಪಿಸಿದ್ದಾರೆ. ಇನ್ನು, ಚೆನ್ನೈಗೆ ಹೋಗಲು ಬೇರೆ ವಿಮಾನ ಇಲ್ಲದ ಕಾರಣ ಕೊನೆಗೆ ಪ್ರಯಾಣಿಕರು ರಾತ್ರಿಯಿಡೀ ವಿಮಾನ ನಿಲ್ದಾಣದಲ್ಲಿ ಉಳಿದು ಮರುದಿನ ವಿಮಾನ ಪ್ರಯಾಣ ಮಾಡಬೇಕಾಯಿತು. ಇಂಡಿಗೋ ಸಂಸ್ಥೆಯವರು ವಿಮಾನ ನಿಲ್ದಾಣದ ಹೋಟೆಲ್‌ನಲ್ಲಿ ವಸತಿ ವ್ಯವಸ್ಥೆಯನ್ನೂ ಮಾಡಲಿಲ್ಲ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ. ಭಾನುವಾರ ರಾತ್ರಿ 9.30 ರ ಸುಮಾರಿಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ಅಮೃತಸರದಿಂದ ಬೆಂಗಳೂರಿನ ಮೂಲಕ ಚೆನ್ನೈಗೆ ಇಂಡಿಗೋ ವಿಮಾನ 6E478 ನಲ್ಲಿ ಈ ಘಟನೆ ನಡೆದಿದೆ. ಘಟನೆಯನ್ನು ದೃಢಪಡಿಸಿದ ಇಂಡಿಗೋ ಮೂಲಗಳು, ಇಬ್ಬರು ಪ್ರಯಾಣಿಕರು ವಿಮಾನ ನಿಲ್ದಾಣದಿಂದ 13 ಕಿಮೀ ದೂರದಲ್ಲಿರುವ ಹೋಟೆಲ್‌ನಲ್ಲಿ ರಾತ್ರಿ ಉಳಿದುಕೊಂಡಿದ್ದರೆ, ಇತರರು ವಿಮಾನ ನಿಲ್ದಾಣದ ಲಾಂಜ್‌ನಲ್ಲಿ ತಂಗಿದ್ದರು. “ಎಲ್ಲರಿಗೂ ಸೋಮವಾರ ಬೆಳಿಗ್ಗೆ ವಿಮಾನಗಳಲ್ಲಿ ಅವಕಾಶ ಕಲ್ಪಿಸಲಾಯಿತು ಮತ್ತು ಚೆನ್ನೈಗೆ ಕಳುಹಿಸಲಾಯಿತು” ಎಂದು ವಿಮಾನಯಾನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ, ಇದನ್ನು ಪ್ರಯಾಣಿಕರು ಶುದ್ಧ ಸುಳ್ಳು ಎಂದು ಅಲ್ಲಗಳೆದಿದ್ದಾರೆ. ಅವರು ತಮಗಾದ ಅನಾನುಕೂಲತೆಗಾಗಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಇಂಡಿಗೋ ಗ್ರೌಂಡ್ ಸಿಬ್ಬಂದಿಯಿಂದ ನನ್ನ ಮೊಬೈಲ್ ಫೋನ್‌ಗೆ ಕರೆ ಬಂದಾಗ ನಾನು ಸೇರಿದಂತೆ ಆರು ಮಂದಿ ವಿಮಾನದಲ್ಲಿದ್ದರು. ಅವರು ಮತ್ತೊಂದು ವಿಮಾನಕ್ಕಾಗಿ ನನ್ನ ಬೋರ್ಡಿಂಗ್ ಪಾಸ್‌ನೊಂದಿಗೆ ವಿಮಾನ ನಿಲ್ದಾಣದ ಒಳಗೆ ನನಗಾಗಿ ಕಾಯುತ್ತಿರುವಾಗ ವಿಮಾನದಿಂದ ಇಳಿಯುವಂತೆ ನನಗೆ ಹೇಳಿದರು. ಚೆನ್ನೈಗೆ ಹೊರಡಲು ಸಿದ್ಧವಾಗಿದೆ ಎಂದು ಪ್ರಯಾಣಿಕರೊಬ್ಬರು ಹೇಳಿದರು. ಇತರ ಐದು ಪ್ರಯಾಣಿಕರಿಗೂ ಇದೇ ರೀತಿಯ ಫೋನ್ ಕರೆಗಳು ಬಂದವು ಮತ್ತು ವಿಮಾನವನ್ನು ಡಿ-ಬೋರ್ಡ್ ಮಾಡಲು ಹೇಳಲಾಯಿತು ಎಂದಿದ್ದಾರೆ. ಈ ಬಗ್ಗೆ ಇಂಡಿಗೋ ಇನ್ನೂ ಅಧಿಕೃತ ಸ್ಪಷ್ಟೀಕರಣವನ್ನು ನೀಡಿಲ್ಲ.