Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಕೊಡಗು : ಮಾಜಿ ಯೋಧನಿಗೆ ಮದುವೆ ಆಸೆ ತೋರಿಸಿ ವಂಚಿಸಿದ ಖದೀಮರು..!

ಮಡಿಕೇರಿ: ಅವಿವಾಹಿತ 64 ವರ್ಷದ ಮಾಜಿ ಯೋಧರೊಬ್ಬರಿಗೆ ಮದುವೆಯ ಆಸೆ ತೋರಿಸಿ, ಬೆದರಿಕೆಯೊಡ್ಡಿ ನಗದು ಮತ್ತು ಚೆಕ್ ನ್ನು ಅಪಹರಿಸಿದ್ದ ಮೂವರು ಆರೋಪಿಗಳನ್ನು ಮಡಿಕೇರಿ ಪೊಲೀಸರು ಬಂಧಸಿದ್ದಾರೆ.

ಸೇನೆಯ ನಿವೃತ್ತ ಯೋಧ, ಕೇರಳ ರಾಜ್ಯದ ಎರ್ನಾಕುಲಂ ಜಿಲ್ಲೆಯ ನಿವಾಸಿ ಜಾನ್ ಮ್ಯಾಥ್ಯು(64) ಎಂಬುವವರೇ ವಂಚನೆಗೊಳಗಾದ ವ್ಯಕ್ತಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳದ ನಿವಾಸಿ ಅಬ್ದುಲ್ ಬಷೀರ್ (29) ಕಡಬದ ನಿವಾಸಿ ಸಾದೀಕ್ (30) ನನ್ನು ಕೊಡಗು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮತ್ತೊಬ್ಬ ಆರೋಪಿ ಫೈಝಲ್ ಈಗಾಗಲೇ ಮೈಸೂರು ನಗರದಲ್ಲಿ ನಡೆದ ಅಪರಾಧ ಪ್ರಕರಣವೊಂದರ ಬಂಧಿಯಾಗಿದ್ದಾನೆ. ತಲೆ ಮರೆಸಿಕೊಂಡಿರುವ ಮತ್ತೋರ್ವ ಆರೋಪಿ ಅಮೀರ್ ಎಂಬಾತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಬಂಧಿತರಿಂದ ಕೃತ್ಯಕ್ಕೆ ಬಳಸಿದ 3 ಮೊಬೈಲ್‌ಗಳು, ರೂ.1,05,000 ನಗದು ಮತ್ತು ರೂ.2,10,000 ಮೌಲ್ಯದ ಚೆಕ್ ಅನ್ನು ವಶಪಡಿಸಿಕೊಂಡಿದ್ದಾರೆ.
ಘಟನೆಯ ವಿವರ :
ಅವಿವಾಹಿತರಾಗಿದ್ದ ನಿವೃತ್ತ ಯೋಧ ಜಾನ್ ಮ್ಯಾಥ್ಯು ಅವರ ಬಳಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಫೈಝಲ್ ಮದುವೆಯಾಗುವಂತೆ ಹುರಿದುಂಬಿಸಿದ್ದಾನೆ. ಮದುವೆಯಾದರೆ ಸಂತೋಷದಿಂದ ಜೀವನ ಸಾಗಿಸಬಹುದು ಎಂದು ಪುಸಲಾಯಿಸಿದ್ದಾನೆ. ನನಗೆ ಪರಿಚಯವಿರುವ ಹುಡುಗಿಯೊಬ್ಬಳಿದ್ದಾಳೆ. ಮದುವೆ ಮಾಡಿಸುತ್ತೇನೆ ಎಂದು ನಂಬಿಸಿ 2023 ನ.26 ರಂದು ಜಾನ್ ಮ್ಯಾಥ್ಯು ಅವರನ್ನು ಮಡಿಕೇರಿ ನಗರದ ಹೋಂಸ್ಟೇಯೊಂದಕ್ಕೆ ಕರೆಸಿದ್ದಾನೆ. ಅಲ್ಲಿ ಫೈಝಲ್, ಅಬ್ದುಲ್ ಬಷೀರ್, ಸಾದೀಕ್ ಹಾಗೂ ಅಮೀರ್ ಎಂಬುವವರುಗಳು ಸೇರಿ ಮಹಿಳೆಯೊಬ್ಬರನ್ನು ತೋರಿಸಿ ಇವರನ್ನು ವಿವಾಹವಾಗುವಂತೆ ನಂಬಿಸಿದ್ದಾರೆ. ಅಲ್ಲದೆ ಹೋಂಸ್ಟೇಯಲ್ಲೇ ನಾಲ್ವರು ಆರೋಪಿಗಳು ಜಾನ್ ಮ್ಯಾಥ್ಯು ಅವರಿಗೆ ಮದುವೆ ಮಾಡಿಸಿದ್ದಾರೆ. ಅಲ್ಲದೆ ಅಲ್ಲೇ ತಂಗಲು ಅವಕಾಶ ಮಾಡಿಕೊಟ್ಟಿದ್ದಾರೆ.
ಅದೇ ದಿನ ಸಂಜೆ ಮತ್ತೆ ಪ್ರತ್ಯಕ್ಷರಾದ ನಾಲ್ವರು ಆರೋಪಿಗಳು ಮದುವೆಯ ಫೋಟೋಗಳನ್ನು ತೋರಿಸಿ ಇದನ್ನು ನಿಮ್ಮ ಕುಟುಂಬದವರಿಗೆ ಹಸ್ತಾಂತರಿಸುವುದಾಗಿ ಜಾನ್ ಮ್ಯಾಥ್ಯು ಅವರಿಗೆ ಬ್ಲ್ಯಾಕ್‌ಮೇಲ್ ಮಾಡಿ 10 ಲಕ್ಷ ರೂ. ನಗದು ನೀಡುವಂತೆ ಬೆದರಿಕೆ ಹಾಕಿದ್ದಾರೆ. ಇದರಿಂದ ಆತಂಕಗೊಂಡ ಜಾನ್ ಮ್ಯಾಥ್ಯು ಅವರು ಆರೋಪಿಗಳಿಗೆ 8 ಲಕ್ಷ ರೂ. ನಗದು ಹಾಗೂ ಉಳಿದ ಮೊತ್ತಕ್ಕೆ ಚೆಕ್ ನೀಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವಂಚನೆಗೊಳಗಾದ ಜಾನ್ ಮ್ಯಾಥ್ಯು ಅವರು ನೀಡಿದ ದೂರಿನ ಹಿನ್ನೆಲೆ ತನಿಖೆ ಕೈಗೊಂಡ ಪೊಲೀಸರು ಆರೋಪಿಗಳ ಸಹಿತ ನಗದು ಮತ್ತು ಚೆಕ್ ನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಮಡಿಕೇರಿ ಉಪವಿಭಾಗದ ಡಿವೈಎಸ್‌ಪಿ ಜಗದೀಶ್ ಎಂ, ಸಿಪಿಐ ಅನೂಪ್ ಮಾದಪ್ಪ, ಡಿಸಿಆರ್‌ಬಿ ಪಿಐ ಐ.ಪಿ.ಮೇದಪ್ಪ, ಮಡಿಕೇರಿ ನಗರ ಪಿಎಸ್‌ಐ ಲೋಕೇಶ್ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕಾರ್ಯದಕ್ಷತೆಯ ಬಗ್ಗೆ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ತಲೆ ಮರೆಸಿಕೊಂಡಿರುವ ಆರೋಪಿ ಅಮೀರ್ ನ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿದೆ ಎಂದು ತಿಳಿಸಿದ್ದಾರೆ.