Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಗಾಜಾದಲ್ಲಿ ನೆರವು ವಿತರಣಾ ಸ್ಥಳದಲ್ಲಿ 100ಕ್ಕೂ ಅಧಿಕ ಮಂದಿಯ ಹತ್ಯೆ? – ವಿಶ್ವಸಂಸ್ಥೆ ಖಂಡನೆ

ಗಾಜಾ: ಪ್ಯಾಲೆಸ್ತೀನ್ ನ ಗಾಜಾದಲ್ಲಿ ಮಾನವೀಯ ನೆರವಿನ ಭಾಗವಾಗಿ ಆಹಾರ ವಿತರಣೆ ಸಂದರ್ಭ 100ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು ಈ ಘಟನೆಯನ್ನು ವಿಶ್ವಸಂಸ್ಥೆ ತೀವ್ರವಾಗಿ ಖಂಡಿಸಿದೆ.

ಘಟನೆ ಹೇಗೆ ಸಂಭವಿಸಿತು ಎಂಬುವುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲದಿದ್ದರೂ, ಇಸ್ರೇಲ್ ಮತ್ತು ಘಟನೆಯ ಪ್ರತ್ಯಕ್ಷದರ್ಶಿಗಳು ಬೇರೆ ಬೇರೆ ಕಥೆಯನ್ನೇ ಹೇಳುತ್ತಿದ್ದಾರೆ ಎಂದು ಸಿಎನ್ಎನ್ ವರದಿಮಾಡಿದೆ. ಇನ್ನೊಂದೆಡೆ ಸಹಾಯ ವಿತರಣೆಯ ಟ್ರಕ್ ಗಾಗಿ ಕಾದು ಕುಳಿತಿದ್ದ 100ಕ್ಕೂ ಹೆಚ್ಚು ಪ್ಯಾಲೆಸ್ತೀನಿಯನ್ನರನ್ನು ಇಸ್ರೇಲಿ ಪಡೆಗಳು ಗುರುವಾರ ಗುಂಡಿಕ್ಕಿ ಕೊಂದಿವೆ ಎಂದು ಗಾಜಾ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಗಾಜಾ ನಗರದ ಬಳಿ ನಡೆದ ಘಟನೆಯಲ್ಲಿ ಕನಿಷ್ಠ 112 ಜನರು ಸಾವನ್ನಪ್ಪಿದ್ದಾರೆ ಮತ್ತು 280 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಪ್ಯಾಲೇಸ್ಟಿನಿಯನ್ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಸುಮಾರು ಐದು ತಿಂಗಳ ಯುದ್ಧದಲ್ಲಿ ಸಾವಿನ ಸಂಖ್ಯೆ 30,000 ದಾಟಿದೆ.

ಪ್ಯಾಲೆಸ್ತೀನ್ ಅಧ್ಯಕ್ಷ ಮಹಮೂದ್ ಅಬ್ಬಾಸ್, “ನಬುಲ್ಸಿ ವೃತ್ತದಲ್ಲಿ ಸಹಾಯ ಟ್ರಕ್‌ಗಳಿಗಾಗಿ ಕಾಯುತ್ತಿದ್ದ ಜನರ ಮೇಲೆ ಇಸ್ರೇಲಿ ಸೇನೆಯು ಆಕ್ರಮಣ ನಡೆಸಿ ಕೊಳಕು ಹತ್ಯಾಕಾಂಡ ಮಾಡಿದೆ” ಎಂದು ಆರೋಪಿಸಿದ್ದಾರೆ.

‘ತೀವ್ರ ಹತಾಶೆಯಲ್ಲಿರುವ ಗಾಜಾ ಜನರಿಗೆ ತುರ್ತು ನೆರವಿನ ಅಗತ್ಯವಿದೆ. ಅದರಲ್ಲೂ ಉತ್ತರ ಗಾಜಾದಲ್ಲಿ ಸಿಲುಕಿರುವವರ ಸ್ಥಿತಿ ಶೋಚನೀಯವಾಗಿದ್ದು , ವಾರದಿಂದ ಇಲ್ಲಿ ವಿಶ್ವ ಸಂಸ್ಥೆ ನೆರವನ್ನು ಒದಗಿಸಲು ಸಾಧ್ಯವಾಗಿರಲಿಲ್ಲ’ ಎಂದು ವಿಶ್ವ ಸಂಸ್ಥೆಯ ಮುಖ್ಯಸ್ಥರ ವಕ್ತಾರ ಸ್ಟೀಫನ್ ಡುಜಾರಿಕ್ ಹೇಳಿದ್ದಾರೆ. ಘಟನಾ ಸ್ಥಳದಲ್ಲಿ ವಿಶ್ವ ಸಂಸ್ಥೆಯ ಪ್ರ ತಿನಿಧಿ ಇರಲಿಲ್ಲ ಎಂದಿರುವ ಅವರು, ಈ ಬಗ್ಗೆ ಕೂಲಂಕಷ ತನಿಖೆಗೆ ಒತ್ತಾಯಿಸಿದ್ದಾರೆ. ಗಾಜಾದಲ್ಲಿ ಜನರ ಸಾವಿನ ಕುರಿತಂತೆ ಪ್ರ ತಿಕ್ರಿಯಿಸಿರುವ ಗುಟೆರಸ್, ತುರ್ತಾಗಿಮಾನವೀಯ ನೆಲೆಯಲ್ಲಿ ಯುದ್ಧ ವಿರಾಮದ ಅಗತ್ಯತೆಯನ್ನು ಒತ್ತಿ ಹೇಳಿದ್ದಾರೆ