Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಗ್ರಾಮೀಣ ಭಾಗಕ್ಕೆ ಹೆಚ್ಚು ವಿಜ್ಞಾನ ತಲುಪಬೇಕು: ವಿಜ್ಞಾನಿ ಶ್ರೀನಾಥ ರತ್ನಕುಮಾರ

 

ಚಿತ್ರದುರ್ಗ : ಗ್ರಾಮೀಣ ಭಾಗಕ್ಕೆ ಹೆಚ್ಚು ವಿಜ್ಞಾನ ತಲುಪಬೇಕು ಎಂದು ಇಸ್ರೋ ಹಿರಿಯ ವಿಜ್ಞಾನಿ ಬೆಂಗಳೂರಿನ ಶ್ರೀನಾಥ ರತ್ನಕುಮಾರ ಹೇಳಿದರು.

ವಿದ್ಯಾವಿಕಾಸ ಸಂಸ್ಥೆಯಲ್ಲಿ ಶನಿವಾರ ಚಿತ್ರದುರ್ಗ ಸೈನ್ಸ್ ಫೌಂಡೇಷನ್ ಉದ್ಗಾಟಸಿ ಮಾತನಾಡಿದರು. ಯಾವುದು ವಿಜ್ಞಾನ ವಿಷಯ, ಯಾವುದು ಮೌಢ್ಯ, ಯಾವುದು ಮೌಢ್ಯ ಅಲ್ಲ ಎನ್ನುವುದನ್ನು ಮೊದಲು ತಿಳಿದುಕೊಳ್ಳಬೇಕು. ಇಸ್ರೋದಲ್ಲಿ ವಿಜ್ಞಾನಿಗಳನ್ನು ಪ್ರತಿ ವರ್ಷವೂ ನೇಮಕ ಮಾಡಿಕೊಳ್ಳಲಾಗುವುದು. 196 ಖಾಸಗಿ ಸಂಸ್ಥೆಗಳು ಹುಟ್ಟಿಕೊಂಡಿವೆ. ಉಪಗ್ರಹ, ರಾಕೆಟ್ ತಯಾರು ಮಾಡುತ್ತಿದೆ. ವಿಜ್ಞಾನ ಎಲ್ಲರಿಗೂ ಉಪಯೋಗವಾಗುವುದಲ್ಲದೆ ವೈಚಾರಿಕತೆಯನ್ನು ತಿಳಿಸಿ ಕೊಡುತ್ತದೆ ಎಂದು ವಿಜ್ಞಾನದ ಮಹತ್ವ ತಿಳಿಸಿದರು.

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ವಿಜ್ಞಾನ ಕ್ಷೇತ್ರಕ್ಕೆ ನುಗ್ಗಬೇಕು. ಚಿತ್ರದುರ್ಗ ಸೈನ್ಸ್ ಫೌಂಡೇಷನ್ ಯಶಸ್ವಿಯಾಗಲಿ. ಅದಕ್ಕೆ ನನ್ನ ಸಹಕಾರವಿದೆ. 75 ವರ್ಷದಲ್ಲಿ ವಿಜ್ಞಾನ ನಗರ ಪ್ರದೇಶದಿಂದ ಗ್ರಾಮೀಣ ಭಾಗಕ್ಕೆ ಹೊರಳುತ್ತಿದೆ. ಚಳ್ಳಕೆರೆ ಸಮೀಪ ಹಳ್ಳಿಯಲ್ಲಿ ಇಸ್ರೋ ಇದೆ. ಚಂದ್ರಯಾನ-2, ಚಂದ್ರಯಾನ-3 ಯಶಸ್ವಿಗೆ ಕೊಡುಗೆ ಕೊಟ್ಟಿದೆ ಎನ್ನುವುದು ಯಾರಿಗೂ ಗೊತ್ತಿಲ್ಲ. ಬೆಂಗಳೂರಿನ ಸಮೀಪದ ಹೊಸಕೋಟೆಯಲ್ಲಿ ಕುಳಿತು ವಿಜ್ಞಾನದ ದತ್ತಾಂಶಗಳನ್ನು ತೆಗೆದುಕೊಳ್ಳುವಷ್ಟು ವಿಜ್ಞಾನ ಮುಂದುವರೆದಿದೆ ಎಂದರು.

ವೈಜ್ಞಾನಿಕ ಸಾಮಾಜಿಕ ತಿಳುವಳಿಕೆ ಪ್ರತಿಯೊಬ್ಬರಲ್ಲಿಯೂ ಮೂಡಿ ಗ್ರಾಮೀಣ ಜನತೆಯಲ್ಲಿ ವಿಜ್ಞಾನ-ತಂತ್ರಜ್ಞಾನ ಗೊತ್ತಾಗಬೇಕು ಎಂದು ಹಿರಿಯ ವಿಜ್ಞಾನಿ ಶ್ರೀನಾಥ ರತ್ನಕುಮಾರ ನುಡಿದರು.

ಚಿತ್ರದುರ್ಗ ಸೈನ್ಸ್ ಫೌಂಡೇಷನ್ನ ಕಾರ್ಯದರ್ಶಿ ಎಚ್.ಎಸ್.ಟಿ.ಸ್ವಾಮಿ ಮಾತನಾಡಿ ಚಿತ್ರದುರ್ಗದಲ್ಲಿ ಈಗಾಗಲೆ ಎಂಟರಿಂದ ಹತ್ತು ವಿಜ್ಞಾನ ಸಂಸ್ಥೆಗಳು ಕೆಲಸ ಮಾಡುತ್ತಿವೆ. ವಿಭಿನ್ನವಾದ ವಿಜ್ಞಾನ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಕೆಲಸ ಮಾಡಬೇಕೆಂಬ ಉದ್ದೇಶದಿಂದ ಚಿತ್ರದುರ್ಗ ಸೈನ್ಸ್ ಫೌಂಡೇಷನ್ ಹುಟ್ಟು ಹಾಕಲಾಗಿದೆ. ಏಳು ಜನ ಸಮಾನ ಮನಸ್ಕರು ಸೇರಿ ಕಟ್ಟಿರುವ ಈ ಫೌಂಡೇಷನ್ನಿಂದ ವಿಜ್ಞಾನ ಚಟುವಟಿಕೆಗೆ ಹೊಸ ಆಯಾಮ ಕೊಡಬೇಕೆಂಬುದು ನಮ್ಮ ಗುರಿ. ವಿಜ್ಞಾನ ಚಟುವಟಿಕೆಳನ್ನು ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ತಲುಪಿಸಬೇಕು. ಎಲ್ಲರೂ ಸೇರಿ ಹೊಸ ವಿಜ್ಞಾನ ಲೋಕ ಕಟ್ಟೋಣ. ಇದರಲ್ಲಿ ವಿಜ್ಞಾನ ಶಿಕ್ಷಕರುಗಳು ಸದಸ್ಯರಾಗಬಹುದು ಎಂದು ಹೇಳಿದರು.

ವಿದ್ಯಾವಿಕಾಸ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಬಿ.ವಿಜಯಕುಮಾರ್ ಮಾತನಾಡಿ ವಿಜ್ಞಾನಕ್ಕೆ ಸಂಬಂಧಿಸಿದಂತೆ ಇಂತಹ ಕಾರ್ಯಕ್ರಮಗಳು ಹೆಚ್ಚು ನಡೆಯಬೇಕು. ನಮ್ಮ ಶಾಲೆಯಲ್ಲಿ ಎಲ್ಲಾ ರೀತಿಯ ವ್ಯವಸ್ಥೆ ಕಲ್ಪಿಸಲು ನಾನು ಸದಾ ಸಿದ್ದ. ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಾರ್ವಜನಿಕರಿಗೆ ವಿಜ್ಞಾನದ ಕುರಿತು ಹೆಚ್ಚಿನ ಜ್ಞಾನ ಮೂಡಿಸುವ ಕೆಲಸವನ್ನು ಚಿತ್ರದುರ್ಗ ಸೈನ್ಸ್ ಫೌಂಡೇಷನ್ ಮಾಡುವಂತಾಗಲಿ ಎಂದು ಹಾರೈಸಿದರು.

ಬಿ.ಆರ್.ಸಿ. ಸಂಪತ್ಕುಮಾರ್, ಚಿತ್ರದುರ್ಗ ಸೈನ್ಸ್ ಫೌಂಡೇಷನ್ನ ಉಪಾಧ್ಯಕ್ಷ ಚಳ್ಳಕೆರೆ ಯರ್ರಿಸ್ವಾಮಿ, ಖಜಾಂಚಿ ಕೆ.ವಿ.ನಾಗೇಂದ್ರರೆಡ್ಡಿ, ನಿರ್ದೇಶಕರುಗಳಾದ ಈ.ರುದ್ರಮುನಿ, ಹೆಚ್.ಮಂಜುನಾಥ್, ಟಿ.ರಮೇಶ್ ಇವರುಗಳು ವೇದಿಕೆಯಲ್ಲಿದ್ದರು.