Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಝೀಕಾ ವೈರಸ್ ಪತ್ತೆ-ಎಚ್ಚೆತ್ತುಕೊಂಡ ಆರೋಗ್ಯ ಇಲಾಖೆ

ಚಿಕ್ಕಬಳ್ಳಾಪುರ: ಬೆಂಗಳೂರು ನಗರ ಜಿಲ್ಲೆಗೆ ಸಮೀಪದಲ್ಲಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸೊಳ್ಳೆಗಳಲ್ಲಿ ಮಾರಣಾಂತಿಕ ಝಿಕಾ ವೈರಸ್ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಕರ್ನಾಟಕ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿದೆ.

ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ದಿಬ್ಬೂರಹಳ್ಳಿ ಹೋಬಳಿಯ ತಲಕಾಯಲಬೆಟ್ಟ ವ್ಯಾಪ್ತಿಯಲ್ಲಿ ಝೀಕಾ ವೈರಸ್ ಪತ್ತೆಯಾಗಿದ್ದು, ಜನರಲ್ಲಿ ಆತಂಕ ಮೂಡಿಸಿದೆ.
ರಾಜ್ಯದ 68 ವಿವಿಧ ಸ್ಥಳಗಳಲ್ಲಿ ಸೊಳ್ಳೆಗಳ ದೇಹದಲ್ಲಿ ಝಿಕಾ ವೈರಸ್ ಇರುವುದನ್ನು ಪರೀಕ್ಷಿಸಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಅಂತೆಯೇ ಚಿಕ್ಕಬಳ್ಳಾಪುರ ಜಿಲ್ಲೆಯ ಆರು ಸ್ಥಳಗಳಿಂದ ಮಾದರಿಗಳನ್ನು ತೆಗೆದುಕೊಳ್ಳಲಾಗಿದೆ.

ಆರೋಗ್ಯ ಇಲಾಖೆಯ ಅಧಿಕಾರಿಗಳು ಸೊಳ್ಳೆಗಳನ್ನು ಹಿಡಿದು ಪರೀಕ್ಷೆಗೆ ಒಳಪಡಿಸಿದಾಗ ಝೀಕಾ ವೈರಸ್ ಪತ್ತೆಯಾಗಿದೆ. ಆದರೆ ಜನರಿಗೆ ಹರಡಿಲ್ಲ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

ಅಧಿಕಾರಿಗಳು 30 ಗರ್ಭಿಣಿಯರು ಮತ್ತು ಜ್ವರ ಲಕ್ಷಣಗಳಿರುವ ಏಳು ಜನರ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಬೆಂಗಳೂರಿಗೆ ಪರೀಕ್ಷೆಗೆ ಕಳುಹಿಸಿದ್ದಾರೆ. ತಲಕಾಯಲ ಬೆಟ್ಟ ಗ್ರಾಮದ ಐದು ಕಿ.ಮೀ ವ್ಯಾಪ್ತಿಯ ಗ್ರಾಮಗಳಿಂದ ಮಾದರಿಗಳನ್ನು ಸಂಗ್ರಹಿಸಲಾಗಿದೆ.

ವೆಂಕಟಾಪುರ, ದಿಬ್ಬೂರಹಳ್ಳಿ, ಬಚ್ಚನಹಳ್ಳಿ, ವಡ್ಡಹಳ್ಳಿ ಮತ್ತಿತರ ಕಡೆ ಅಧಿಕಾರಿಗಳು ಖುದ್ದು ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಝಿಕಾ ವೈರಸ್ ಪತ್ತೆಯಾಗಿರುವುದನ್ನು ಚಿಕ್ಕಬಳ್ಳಾಪುರ ಜಿಲ್ಲಾ ಆರೋಗ್ಯಾಧಿಕಾರಿ ಮಹೇಶ್ ಕುಮಾರ್ ಖಚಿತಪಡಿಸಿದ್ದರು.

ಝಿಕಾ ವೈರಸ್ ಸೊಳ್ಳೆಯಿಂದ ಹರಡುವ ವೈರಲ್ ಸೋಂಕು. ಜ್ವರ, ದದ್ದು, ತಲೆನೋವು, ಕೀಲು ನೋವು, ಕೆಂಪು ಕಣ್ಣುಗಳು ಮತ್ತು ಸ್ನಾಯು ನೋವು ಇದರ ಲಕ್ಷಣಗಳಾಗಿವೆ. ಝಿಕಾ ಜನ್ಮ ದೋಷಗಳಿಗೆ ಕಾರಣವಾಗಬಹುದು.

ಝೀಕಾ ವೈರಸ್ ಕಂಡುಬಂದಿರುವ ತಲಕಾಯಲಬೆಟ್ಟ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಆರೋಗ್ಯ ಇಲಾಖೆ ತಂಡ ಬೀಡು ಬಿಟ್ಟು ಮನೆ ಮನೆ ಸಮೀಕ್ಷೆ, ರಕ್ತ ಸಂಗ್ರಹಕ್ಕೆ ಮುಂದಾಗಿದೆ. ಜೊತೆಗೆ ಜೊತೆಗೆ ವೈರಸ್ ಹರದಡಂತೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುತ್ತಿದೆ.