Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಚುನಾವಣೆಯಲ್ಲಿ ಕೇಂದ್ರ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಬೇಕು: ಬಡಗಲಪುರ ನಾಗೇಂದ್ರ

 

ಚಿತ್ರದುರ್ಗ : ಕಾರ್ಪೊರೇಟ್, ಬಂಡವಾಳಶಾಹಿಗಳ ಪರವಾಗಿರುವ ಕೇಂದ್ರ ಬಿಜೆಪಿ.ಸರ್ಕಾರವನ್ನು ಈ ಬಾರಿಯ ಪಾರ್ಲಿಮೆಂಟ್ ಚುನಾವಣೆಯಲ್ಲಿ ಕಿತ್ತೊಗೆಯಬೇಕೆಂದು ರೈತ ನಾಯಕ ಬಡಗಲಪುರ ನಾಗೇಂದ್ರ ರೈತ ಕುಲಕ್ಕೆ ಕರೆ ನೀಡಿದರು.

ರೋಟರಿ ಬಾಲ ಭವನದ ಮುಂಭಾಗ ಬುಧವಾರ ಹಮ್ಮಿಕೊಳ್ಳಲಾಗಿದ್ದ ರಾಜ್ಯ ಮಟ್ಟದ ರೈತ ಕಾರ್ಮಿಕ ಪಂಚಾಯತ್ನಲ್ಲಿ ಭಾಗವಹಿಸಿ ಮಾತನಾಡಿದರು.

ದೆಹಲಿಯಲ್ಲಿ ಹದಿಮೂರು ತಿಂಗಳುಗಳ ಕಾಲ ರೈತರು ನಡೆಸಿದ ಚಳುವಳಿಯಲ್ಲಿ ರೈತರ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ ನೀಡುವುದಾಗಿ ಭರವಸೆ ಕೊಟ್ಟ ಪ್ರಧಾನಿ ಮೋದಿ ಇನ್ನು ಬೆಲೆ ನಿಗಧಿಪಡಿಸಿಲ್ಲ. ನರೇಗಾ ಯೋಜನೆಯಡಿ ನೂರು ದಿನಗಳ ಕಾಲ ಉದ್ಯೋಗ ಕೊಡಬೇಕು. ಮನುಷ್ಯತ್ವವಿಲ್ಲದ ಕೇಂದ್ರ ಸರ್ಕಾರದಿಂದ ಯುವಕರಿಗೆ, ರೈತರಿಗೆ, ಕಾರ್ಮಿಕರಿಗೆ, ಮೋಸವಾಗುತ್ತಿದೆ. ಜನಸಾಮಾನ್ಯರ ಬದುಕನ್ನೆ ಕಿತ್ತುಕೊಳ್ಳುತ್ತಿರುವ ಕೇಂದ್ರ ಸರ್ಕಾರದಿಂದ ಇಂಡಿಯಾ ಉಳಿಯಲ್ಲ. ಮಾ.14 ರಂದು ನವದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆಯುವ ಮಹತ್ವದ ಸಭೆಯಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಎಂದು ಮನವಿ ಮಾಡಿದರು.

ಸಾಮಾಜಿಕ ಪರಿವರ್ತನಾ ಸಂಸ್ಥೆ ಅಧ್ಯಕ್ಷ ಎಸ್.ಆರ್.ಹಿರೇಮಠ್ ಮಾತನಾಡಿ ನರೇಂದ್ರಮೋದಿ ದೇಶದ ಪ್ರಧಾನಿಯಾದಾಗಿನಿಂದಲೂ ಅಘೋಷಿತ ತುರ್ತು ಪರಿಸ್ಥಿತಿಯಿರುವುದರಿಂದ ಗಂಭೀರವಾದ ಗಂಡಾಂತರಗಳನ್ನು ಎದುರಿಸುವಂತಾಗಿದೆ. ರೈತರು, ಕಾರ್ಮಿಕರು, ಶ್ರಮಿಕ ವರ್ಗದವರು ಪರಿತಪಿಸುತ್ತಿದ್ದಾರೆ. ದುಡಿಯುವ ಕೈಗಳಿಗೆ ಕನಿಷ್ಠ ವೇತನ ಸಿಗುತ್ತಿಲ್ಲ. ಇದೆ ತಿಂಗಳ ಹದಿನಾಲ್ಕರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆಯುವ ಮಹತ್ವದ ಸಭೆಯಲ್ಲಿ ಅನೇಕ ತೀರ್ಮಾನಗಳನ್ನು ಕೈಗೊಳ್ಳಲಾಗುವುದು. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಿ ಎಂದು ತಿಳಿಸಿದರು.

ನರೇಂದ್ರಮೋದಿ ತನ್ನ ಪ್ರಭಾವ ಬಳಸಿ ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ ತಂದಿರುವುದು ದೊಡ್ಡ ಹಗರಣ. ರೈತರು, ಕಾರ್ಮಿಕರು, ಜನಸಾಮಾನ್ಯರು ಹಾಗೂ ದುಡಿಯುವ ವರ್ಗದ ಭವಿಷ್ಯ, ಅಸ್ತಿತ್ವ, ಸಂವಿಧಾನದ ಮೇಲೆ ನಿಂತಿದೆ. ಹಾಗಾಗಿ ಈ ಬಾರಿಯ ಪಾರ್ಲಿಮೆಂಟ್ ಚುನಾವಣೆಯಲ್ಲಿ ಕೋಮುವಾದಿ ಬಿಜೆಪಿ.ಯನ್ನು ಅಧಿಕಾರದಿಂದ ದೂರವಿಡಬೇಕಿದೆ ಎಂದು ಹೇಳಿದರು.

ಸರ್ವೋದಯ ಕರ್ನಾಟಕ ಪಕ್ಷದ ಜಿಲ್ಲಾಧ್ಯಕ್ಷ ಜೆ.ಯಾದವರೆಡ್ಡಿ ಮಾತನಾಡುತ್ತ 1998 ರಲ್ಲಿ ಅಪ್ಪರ್ಭದ್ರಾ ಯೋಜನೆಗೆ ಆಡಳಿತಾತ್ಮಕ ಮಂಜೂರಾತಿ ಸಿಕ್ಕಿತು. ಆದರೆ ಅಂದಿನಿಂದ ಇಲ್ಲಿಯವರೆಗೂ ಕಾಮಗಾರಿ ಆಮೆ ಗತಿಯಲ್ಲಿ ಸಾಗುತ್ತಿದೆ. ನಾಲ್ಕು ಸಾವಿರ ಕೋಟಿ ರೂ.ಗಳ ಯೋಜನೆ ಈಗ 22 ಸಾವಿರ ಕೋಟಿಗೆ ಮುಟ್ಟಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿವೆ. ಪಕ್ಷಾತೀತವಾಗಿ ಎಲ್ಲಾ ರಾಜಕೀಯ ಪಕ್ಷಗಳು ಚಿತ್ರದುರ್ಗ ಜಿಲ್ಲೆಗೆ ಪರಮ ಅನ್ಯಾಯವೆಸಗಿವೆ. ಅನೇಕ ಹೋರಾಟ, ಚಳುವಳಿ, ಧರಣಿ, ಪ್ರತಿಭಟನೆಗಳಾಗಿವೆ. ರಾಜಕಾರಣಿಗಳಿಗೆ ಇಚ್ಚಾಶಕ್ತಿಯಿಲ್ಲದ ಕಾರಣ ಅಪ್ಪರ್ಭದ್ರಾ ಯೋಜನೆ ಇನ್ನು ಜಾರಿಯಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ ಶಾಸಕರುಗಳ ಮನೆಗಳಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದರು.

ಕಾರ್ಮಿಕ ಮುಖಂಡ ಅಪ್ಪಣ್ಣ ಮಾತನಾಡಿ ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಯಿಂದ ರೈತರು, ಕಾರ್ಮಿಕರು ದಲಿತರು ಪರಿತಪಿಸುತ್ತಿದ್ದಾರೆ. ಕಾರ್ಮಿಕರ ಪರವಾಗಿರುವ ಕಾನೂನುಗಳು ತಿದ್ದುಪಡಿಯಾಗುತ್ತಿವೆ. ಹೊಸ ಹೊಸ ಹೆಸರುಗಳು ಹುಟ್ಟಿಕೊಳ್ಳುತ್ತಿರುವುದರ ಹಿಂದೆ ದೊಡ್ಡ ಗೂಡಾಲೋಚನೆಯಿದೆ. ಸಾರ್ವಜನಿಕ ಉದ್ದಿಮೆಗಳು ಮಾರಾಟವಾಗುತ್ತಿವೆ. ವಿದ್ಯುತ್ ಖಾಸಗಿಕರಣಗೊಳಿಸಿ ರೈತರು ಕಾರ್ಮಿಕರನ್ನು ಕಟ್ಟಿ ಹಾಕಲಾಗುತ್ತಿದೆ. ಇದರ ವಿರುದ್ದ ಎಚ್ಚೆತ್ತುಕೊಳ್ಳಬೇಕೆಂದರು.

ದೆಹಲಿಯಲ್ಲಿ ಚಳುವಳಿ ನಡೆಸುತ್ತಿರುವ ರೈತರನ್ನು ಕೇಂದ್ರ ಸರ್ಕಾರ ತೀವ್ರವಾದಿಗಳಂತೆ ಕಾಣುತ್ತಿರುವುದು ದುರಂತ. ನ್ಯಾಯಾಂಗ ಕೂಡ ರೈತರ ಪರವಾಗಿಲ್ಲ. ಕಾರ್ಮಿಕರು, ರೈತರ ಆಲೋಚನೆಗಳನ್ನು ದಿಕ್ಕುತಪ್ಪಿಸುತ್ತಿದೆ. ರೈತ ಉಳಿದರೆ ಕಾರ್ಮಿಕ ಉಳಿಯಲು ಸಾಧ್ಯ ಎಂದರು.

ಯಶವಂತ್ ಮಾತನಾಡುತ್ತ ರೈತರನ್ನು ಸರ್ವನಾಶಗೊಳಿಸುವ ಸುಗ್ರಿವಾಜ್ಞೆ ತರಲು ಕೇಂದ್ರ ಮುಂದಾಗಿದೆ. ಪಂಜಾಬ್ ಹರಿಯಾಣ ರೈತರು ಹೋರಾಟಕ್ಕೆ ಇಳಿದಿದ್ದಾರೆ. ವಚನದ್ರೋಹಿ ಪ್ರಧಾನಿ ನರೇಂದ್ರಮೋದಿ ರೈತರು ಕಾರ್ಮಿಕರ ಯಾವ ಬೇಡಿಕೆಗಳನ್ನು ಈಡೇರಿಸುತ್ತಿಲ್ಲ. ಋಣಮುಕ್ತ ತನ್ನಿ ಎಂದು ರೈತರು ಕೇಳುತ್ತಿದ್ದಾರೆ. ಮತ್ತಿನ್ನೇನು ಅಲ್ಲ. 554 ಸಂಘಟನೆಗಳು ರೈತರ ಚಳುವಳಿಗೆ ಬೆಂಬಲ ಸೂಚಿಸಿವೆ. ಒಂದು ಸಾವಿರ ರೈತರು ಕರ್ನಾಟಕದಿಂದ ಹೋಗುತ್ತೇವೆಂದು ತಿಳಿಸಿದರು.

ಸತ್ಯಪ್ಪ ಮಲ್ಲಾಪುರ, ಮಲಿಯಪ್ಪ, ಸಿ.ಕೆ.ಗೌಸ್ಪೀರ್, ಕಾರ್ಮಿಕ ಮುಖಂಡ ಜಿ.ಸಿ.ಸುರೇಶ್ಬಾಬು, ವೈ.ಕುಮಾರ್, ತಿಪ್ಪೇಸ್ವಾಮಿ, ರೈತ ನಾಯಕ ಹೆಚ್.ಆರ್.ಬಸವರಾಜಪ್ಪ, ಮಂಜುಳ ಅಕ್ಕಿ, ಕುಮಾರ್ ಸಮತಳ ಇನ್ನು ಅನೇಕರು ವೇದಿಕೆಯಲ್ಲಿದ್ದರು.