Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

‘ಜಾತಿಗಣತಿ ವರದಿ ಜಾರಿ ವಿಚಾರದಲ್ಲಿ ನನ್ನ ನಿರ್ಧಾರ ಅಚಲ’ – ಸಿದ್ದರಾಮಯ್ಯ

ಬೆಂಗಳೂರು:ಜಾತಿಗಣತಿ ವರದಿ ಜಾರಿ ವಿಚಾರದಲ್ಲಿ ನನ್ನ ನಿರ್ಧಾರ ಅಚಲವಾಗಿದೆ ಎಂದು ಹೇಳುವ ಮೂಲಕ ಸಿಎಂ ಸಿದ್ದರಾಮಯ್ಯ ಅವರು ವರದಿ ಬಿಡುಗಡೆ ಮಾಡುವುದಾಗಿ ಮತ್ತೊಮ್ಮೆ ಹೇಳಿದರು. ವರದಿ ಬಿಡುಗಡೆ ಸ್ವತಃ ಡಿಸಿಎಂ ಡಿಕೆ ಶಿವಕುಮಾರ್ ಅವರಿಂದ ವಿರೋಧ ವ್ಯಕ್ತವಾದ ಬೆನ್ನಲ್ಲೇ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಹೇಳಿಕೆಯನ್ನು ಮುಂದಿಟ್ಟುಕೊಂಡು ಟ್ವೀಟ್ ಮಾಡಿದ್ದಾರೆ.

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಾಡುವ ಮೊದಲ ಕೆಲಸ ಜಾತಿ ಗಣತಿ ಪ್ರಕ್ರಿಯೆಗೆ ಚಾಲನೆ ನೀಡುವುದು. ಜಾತಿಗಣತಿ ನಡೆಸಿದಾಗಲೇ ಭಾರತ ಮಾತೆಗೆ ಜಯ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆ ನೀಡಿದ್ದಾರೆ.

ಈ ಹೇಳಿಕೆಯ ಪೋಸ್ಟರ್ ಅನ್ನು ಟ್ವೀಟ್ ಮೂಲಕ ಹಂಚಿಕೊಂಡ ಸಿದ್ದರಾಮಯ್ಯ, ಅವರು, ನಮ್ಮ ಹೆಮ್ಮೆಯ ನಾಯಕರಾದ ರಾಹುಲ್ ಗಾಂಧಿಯವರ ನಿಲುವಿಗೆ ನನ್ನ ಪೂರ್ಣ ಸಹಮತವಿದೆ. ದೇಶಾದ್ಯಂತ ಜಾತಿಗಣತಿ ನಡೆದು, ಅದರ ವರದಿಯ ಆಧಾರದ ಮೇಲೆ ಸರ್ವರಿಗೂ ಸಮಪಾಲು- ಸರ್ವರಿಗೂ ಸಮಬಾಳು ಸಿಕ್ಕಿದಾಗಲೇ ದೇಶಕ್ಕೆ ದೊರೆತ ಸ್ವಾತಂತ್ರ್ಯ ಸಾರ್ಥಕವಾಗಲಿದೆ ಎಂಬುದು ನನ್ನ ಭಾವನೆ ಎಂದಿದ್ದಾರೆ.

ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ನಡೆಸಿದ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿ ಸ್ವೀಕರಿಸಿ, ಅವಕಾಶಗಳಿಂದ ವಂಚಿತವಾದ ಸಮುದಾಯಗಳಿಗೆ ನ್ಯಾಯ ಕೊಡಿಸುವ ನನ್ನ ನಿರ್ಧಾರ ಅಚಲವಾಗಿದೆ ಎಂದು ಸಿದ್ದರಾಮಯ್ಯ ಟ್ವೀಟ್​ನಲ್ಲಿ ಬರೆದುಕೊಂಡಿದ್ದಾರೆ.

ವರದಿ ಬಿಡುಗಡೆಗೆ ಸಿದ್ದರಾಮಯ್ಯ ಅವರು ತುದಿಗಾಲಿನಲ್ಲಿ ನಿಂತಿದ್ದಾರೆ. ಸಚಿವರಾದ ಜಿ.ಪರಮೇಶ್ವರ್, ಶಿವರಾಜ್ ತಂಗಡಗಿ, ಸತೀಶ್ ಜಾರಕಿಹೊಳಿ ಸೇರಿದಂತೆ ಕೆಲವು ಸಚಿವರು ವರದಿ ಬಿಡುಗಡೆಗೆ ಒತ್ತಾಯಿಸುತ್ತಿದ್ದಾರೆ. ಆದರೆ, ಸ್ವಪಕ್ಷದ ಹಿರಿಯ ನಾಯಕರೂ ಆಗಿರುವ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರ ತೀವ್ರ ಆಕ್ಷೇದ ನಂತರ ಲಿಂಗಾಯತ ಸಮುದಾಯದ ಅನೇಕ ನಾಯಕರಿಂದ ವರದಿ ಬಿಡುಗಡೆಗೆ ವಿರೋಧ ವ್ಯಕ್ತವಾಗಿದೆ.