Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ತಿಂಗಳಿನೊಳಗಾಗಿ ಬೆಳೆ ವಿಮೆ ಹಣ ಪಾವತಿ : ಸಚಿವರ ಭರವಸೆ

ಬೆಳಗಾವಿ: ದೇಶದ ರೈತರ ಹಿತ ರಕ್ಷಣೆ ರಾಜ್ಯ ಸರ್ಕಾರದ ಆದ್ಯ ಕರ್ತವ್ಯ ಆಗಿದೆ. ಈಗಾಗಲೇ ರಾಜ್ಯದಲ್ಲಿ ತೀವ್ರ ಬರ ಕಾಣಿಸಿಕೊಂಡಿದ್ದು, ಈ ಹಿನ್ನಲೆಯಲ್ಲಿ ತಿಂಗಳಿನೊಳಗಾಗಿ ಬೆಳೆ ವಿಮೆ ಹಣ ಪಾವತಿ ಮಾಡಲಾಗುವುದು ಎಂದು ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ತಿಳಿಸಿದ್ದಾರೆ.

ಈ ಬಗ್ಗೆ ಬೆಳಗಾವಿ ವಿಧಾನ ಸಭೆಯಲ್ಲಿ ಪ್ರತಿಕ್ರಿಯಿಸಿದ ಅವರು, ಈ ವರ್ಷ ಹಲವು ಪ್ರದೇಶಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಲಾಗಿತ್ತು. ಈ ನಿಟ್ಟಿನಲ್ಲಿ ಪ್ರಿವೆಂಟೀವ್ ಸೋಯಿಂಗ್ ಇನ್ವೋಕ್ ಹಾಗೂ ಮಿಡ್ ಸೀಜನ್ ಅಡ್ವರ್ಸಿಟಿ ಅಡಿ ಅಂದಾಜಿಸಲಾದ ಪರಿಹಾರ ಸುಮಾರು 450 ಕೋಟಿ ರೂಪಾಯಿ ಭರಿಸಲಾಗಿದೆ. ಇದರೊಂದಿಗೆ ಬೆಳೆ ಕಟಾವ್ ಸಮೀಕ್ಷೆ ಕೂಡ ಪೂರ್ಣಗೊಂಡಿದ್ದು, ಉಳಿದ ರೈತರಿಗೂ ವಿಮೆ ಹಣ ಶೀಘ್ರವೇ ಸಿಗಲಿದೆ ಎಂದರು.

ಇನ್ನು ಬೆಳೆ ಕಟಾವ್ ಸಮೀಕ್ಷೆಯಲ್ಲಿ ಕೇಂದ್ರ ಸರಕಾರದ ಮಾರ್ಗಸೂಚಿಯನ್ನು ಬದಲಾಯಿಸುವಂತೆ ರಾಜ್ಯ ಸರಕಾರದಿಂದ ಪತ್ರದ ಮೂಲಕ ಹಾಗೂ ಕೇಂದ್ರ ಹಣಕಾಸು ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿದ್ದರೂ ಈ ಮಾರ್ಗಸೂಚಿಯನ್ನು ಬದಲಾಯಿಸಲು ಕೇಂದ್ರ ಸರಕಾರ ಒಪ್ಪಿಗೆ ನೀಡುತ್ತಿಲ್ಲ. ಆದರೂ ರಾಜ್ಯ ಸರ್ಕಾರ ರೈತರ ಹಿತವನ್ನು ಕಾಯ್ದುಕೊಂಡು, ಯಾವುದೇ ತೊಂದರೆಯಾಗದಂತೆ ವಿಶೇಷ ಗಮನಹರಿಸುವಂತೆ ಜಿಲ್ಲಾಧಿಕಾರಿಗಳು ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ ಅವರು ಈ ಜವಾಬ್ದಾರಿ ನಿಭಾಯಿಸಲಿದ್ದಾರೆ ಎಂದು ಕೃಷಿ ಸಚಿವರು ಭರವಸೆ ನೀಡಿದರು.