Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ದೇಶದ ಪ್ರಪ್ರಥಮ ವಿಮಾನ ನಿರ್ವಹಣೆ, ದುರಸ್ತಿ ಯೋಜನೆಗೆ ಚಾಲನೆ

ಬೆಂಗಳೂರು: ರಾಜ್ಯದಲ್ಲಿ ವಿವಿಧ ಯೋಜನೆಗಳಿಗೆ 2,300 ಕೋಟಿ ರೂ. ಹೂಡಿಕೆ ಮಾಡಲು ಟಾಟಾ ಸಮೂಹದ ಭಾಗವಾಗಿರುವ ಏರ್ ಇಂಡಿಯಾ ಮತ್ತು ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ ಮುಂದಾಗಿವೆ. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಗೂ ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ ಅವರ ಸಮ್ಮುಖದಲ್ಲಿ ಸೋಮವಾರ ಈ ಕುರಿತ ಒಡಂಬಡಿಕೆಗೆ ಅಂಕಿತ ಹಾಕಲಾಯಿತು.

ಬಳಿಕ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಮತ್ತು ಏರ್ ಇಂಡಿಯಾದ ಮುಖ್ಯ ವಾಣಿಜ್ಯ ವ್ಯವಹಾರ ಅಧಿಕಾರಿಗಳು ಒಡಂಬಡಿಕೆ ಪತ್ರಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡರು. ಒಡಂಬಡಿಕೆ ವಿನಿಮಯದ ನಂತರ ವಿಧಾನಸೌಧದಲ್ಲಿ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಎಂ.ಬಿ. ಪಾಟೀಲ್ ಅವರು, ಟಾಟಾ ಸಮೂಹದ ಈ ಹೂಡಿಕೆಯಿಂದ ನೇರವಾಗಿ 1,650 ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದರು. ಒಟ್ಟು ಹೂಡಿಕೆಯ ಪೈಕಿ ಏರ್ ಇಂಡಿಯಾ ಕಂಪನಿಯು ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ವಿಮಾನಗಳ ನಿರ್ವಹಣೆ, ದುರಸ್ತಿ ಮತ್ತು ಓವರ್-ಹಾಲ್ (ಎಂಆರ್ ಒ) ಘಟಕವನ್ನು ಸ್ಥಾಪಿಸಲು 1,300 ಕೋಟಿ ರೂ. ಹೂಡುತ್ತಿದೆ. ಇದರಿಂದಾಗಿ 1,200 ಜನರಿಗೆ ನೇರವಾಗಿ ಉದ್ಯೋಗ ಸಿಗಲಿದ್ದು, ಪರೋಕ್ಷವಾಗಿ 25 ಸಾವಿರಕ್ಕೂ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಲಿವೆ. ಇಡೀ ದೇಶದಲ್ಲೇ ಇದು ಮೊಟ್ಟಮೊದಲ ಯೋಜನೆಯಾಗಿದೆ ಅಂತಾನೂ ಸಚಿವ ಎಂ.ಬಿ ಪಾಟೀಲ್ ಅವರು ತಿಳಿಸಿದರು.