Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

‘ನನ್ನ ಮೇಲೆ ಹಲ್ಲೆಗೆ ಸಿಎಂ ಪಿಣರಾಯಿ ಸಂಚು’: ಕೇರಳ ರಾಜ್ಯಪಾಲರ ಆರೋಪ

ತಿರುವನಂತಪುರ: ಕೇರಳದಲ್ಲಿ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಮತ್ತು ಸಿಎಂ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರದ ನಡುವಿನ ಕೆಸರೆರೆಚಾಟ ಮತ್ತೊಂದು ಹಂತಕ್ಕೆ ಮುಂದುವರಿದಿದ್ದು, “ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ನನ್ನ ಮೇಲೆ ದೈಹಿಕ ಹಲ್ಲೆಗೆ ಸಂಚು ನಡೆಸಿದ್ದಾರೆ’ ಎಂದು ಕೇರಳ ರಾಜ್ಯಪಾಲ ಆರಿಫ್‌ ಮೊಹಮ್ಮದ್‌ ಖಾನ್‌ ಆರೋಪಿಸಿದ್ದಾರೆ.

ದೆಹಲಿಗೆ ತೆರಳುವ ಸಲುವಾಗಿ ವಿಮಾನ ನಿಲ್ದಾಣದತ್ತ ಹೊರಟಿದ್ದ ಆರಿಫ್‌ ಅವರ ವಾಹನವನ್ನು ಆಡಳಿತಾರೂಢ ಸಿಪಿಐ (ಎಂ) ಪಕ್ಷದ ವಿದ್ಯಾರ್ಥಿ ಘಟಕ ಸ್ಟುಡೆಂಟ್ ಫೆಡರೇಷನ್ ಆಫ್ ಇಂಡಿಯಾದ (ಎಸ್‌ಎಫ್‌ಐ) ಕಾರ್ಯಕರ್ತರು ತಡೆದು, ಕಪ್ಪು ಬಾವುಟ ಪ್ರದರ್ಶಿಸಿದ್ದರು.ಇದರ ಬೆನ್ನಲ್ಲೇ ಆರಿಫ್‌ ಅವರು ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಕಾರ್ಯಕ್ರಮ ನಡೆಯುತ್ತಿದ್ದರೆ, ಅತ್ತ ಪ್ರತಿಭಟನಾಕಾರರ ವಾಹನಗಲು ಸಾಗಲು ಪೊಲೀಸರು ಅನುಮತಿ ನೀಡುತ್ತಿದ್ದರೇ? ಮುಖ್ಯಮಂತ್ರಿಯ ಕಾರಿನ ಸಮೀಪಕ್ಕೆ ಯಾರಾದರು ಬರಲು ಬಿಡುತ್ತಿದ್ದರೆ?’ಎಂದು ಖಡಕ್ ಆಗಿ ಪ್ರಶ್ನಿಸಿದ್ದಾರೆ.

ಹೀಗಾಗಿ ಈ ಘಟನೆಯ ಬಗ್ಗೆ ನಾನು ಸ್ಪಷ್ಟವಾಗಿ ಹೇಳುತ್ತೇನೆ. ನನಗೆ ದೈಹಿಕವಾಗಿ ಘಾಸಿ ಮಾಡಲು ಸಂಚು ರೂಪಿಸಿದ್ದು ಮತ್ತು ಜನರನ್ನು ಕಳುಹಿಸಿದ್ದು ಮುಖ್ಯಮಂತ್ರಿಗಳು. ಅವರ ನಿರ್ದೇಶನದಂತೆ ಈ ದಾಳಿ ನಡೆದಿದೆ.ಇಂತಹ ರೌಡಿಗಳು, ಕ್ರಿಮಿನಲ್‌ಗಳ ವಿರುದ್ಧ ಕ್ರಮ ಕೈಗೊಳ್ಳದಂತೆ ಪೊಲೀಸರನ್ನು ನಿಯಂತ್ರಣದಲ್ಲಿ ಇಡಲಾಗಿದೆ ಎಂದೂ ಬೇಸರ ವ್ಯಕ್ತಪಡಿಸಿದ್ದಾರೆ.

ಎಸ್‌ಎಫ್‌ಐ ಕಾರ್ಯಕರ್ತರು ರಾಜ್ಯಪಾಲರ ವಾಹನವನ್ನು ಒಂದು ಕಡೆ ತಡೆದು ಕಪ್ಪು ಬಾವುಟ ಪ್ರದರ್ಶಿಸಿದ್ದಾರೆ. ಈ ಸಂಬಂಧ ಏಳು ಮಂದಿಯನ್ನು ಬಂಧಿಸಲಾಗಿದೆ. ಈ ಬಗ್ಗೆ 10-12 ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.