Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

‘ನಮ್ಮದು ಆಪರೇಷನ್ ಅಲ್ಲ, ಸ್ನೇಹದ ಹಸ್ತ’: ಡಿಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು: “ನಾನು ಆಪರೇಷನ್ ಹಸ್ತ, ಆಪರೇಷನ್ ಕಮಲ ಎರಡರ ವಿರೋಧಿ. ಯಾವುದೇ ಕಾರಣಕ್ಕೂ ಈ ಕೆಲಸಕ್ಕೆ ಮುಂದಾಗುವುದಿಲ್ಲ‌. ನಮ್ಮದೇನಿದ್ದರು ಕೋ-ಆಪರೇಷನ್” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳು ಶುಕ್ರವಾರ, ಸುಕುಮಾರ್ ಶೆಟ್ಟಿ ಅವರು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆಯೇ ಎಂದು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.

“ನಾವು ಸ್ನೇಹದ ಹಸ್ತ ಚಾಚುತ್ತೇವೆ. ನಮ್ಮ ಪಕ್ಷದ ತತ್ವ ಸಿದ್ದಾಂತ, ಭಾರತ್ ಜೋಡೊ ಬಗ್ಗೆ ಯಾರಿಗೆ ಒಲವಿದೆ ಅವರನ್ನು ತಬ್ಬಿಕೊಳ್ಳುತ್ತೇವೆ. ಅವರ ಹೆಗಲ ಮೇಲೆ ಕೈಹಾಕಿಕೊಂಡು ಹೆಜ್ಜೆ ಹಾಕುತ್ತೇವೆ” ಎಂದರು.

ಹಾಲಿ- ಮಾಜಿಗಳನ್ನ ಯಾವಾಗ ತಬ್ಬಿಕೊಳ್ಳುವಿರಿ ಎಂಬ ಮರುಪ್ರಶ್ನೆಗೆ ಉತ್ತರಿಸುತ್ತಾ “ಎಷ್ಟು ಜನ ಸೇರಲಿದ್ದಾರೆ ಎನ್ನುವ ಪಟ್ಟಿ ಹೇಳಲು ಆಗಲ್ಲ. ಅವರವರೇ ಹೇಳಿರುವಂತೆ ಒಳ್ಳೆ ಮುಹೂರ್ತ, ಲಗ್ನ ಕೂಡಿಬಂದಾಗ ನಡೆಯಲಿದೆ” ಎಂದು ತಿಳಿಸಿದರು.

“ರಾಜಕೀಯದಲ್ಲಿ ಯಾರೂ ಮಿತ್ರರಲ್ಲ, ಶತ್ರುಗಳಲ್ಲ. ರಾಜಕೀಯ ಎನ್ನುವುದು ಸಾಧ್ಯತೆಗಳ ಕಲೆ ನಾವು ಯಾರನ್ನು ಕರೆಯುವುದಿಲ್ಲ. ರಾಜಕೀಯದಲ್ಲಿ ಯಾರೂ ದಡ್ಡರಲ್ಲ. ಎಲ್ಲರೂ ಅವರವರ ಭವಿಷ್ಯ ನೋಡಿಕೊಳ್ಳಬೇಕು. ಮಹಾರಾಷ್ಟ್ರದಲ್ಲಿ ಎಲ್ಲಾ ವಾಷಿಂಗ್ ಮೆಷಿನ್ ಸೇರಿಕೊಂಡು ಬಿಡಲಿಲ್ಲವೇ” ಎಂದು ತಿಳಿಸಿದರು.

 ರಾಜ್ಯದ ರೈತರ ಹಿತ ಮುಖ್ಯ:

ಕಾವೇರಿ ನೀರನ್ನು ನಿಲ್ಲಿಸಲಾಗಿದೆಯೇ ಎನ್ನುವ ಪ್ರಶ್ನೆಗೆ “ನಮಗೆ ಸಾಕಷ್ಟು ಒಳಹರಿವು ಬರುತ್ತಿಲ್ಲ. ಸುಪ್ರೀಂ ಕೋರ್ಟ್ ಹೇಳಿದ ಪ್ರಮಾಣದಷ್ಟು ನೀರನ್ನು ಬಿಡಲು ಆಗುತ್ತಿಲ್ಲ. ಮಳೆಯ ನಿರೀಕ್ಷೆಯಲ್ಲಿದ್ದೇವೆ. ಜೊತೆಗೆ ನಮ್ಮ ರೈತರ ಹಿತ ಕಾಯುವುದು ಮುಖ್ಯ, ಅದಕ್ಕೆ ನಾವು ಬದ್ಧ.

ನೀರು ಬಿಡುಗಡೆ ಮಾಡಬಾರದು ಎಂದು ಪ್ರತಿಭಟನೆಗಳು ನಡೆಯುತ್ತಿವೆ, ಬೆಂಗಳೂರು, ರಾಮನಗರ ಭಾಗಗಳಲ್ಲಿ ಮಳೆ ಬೀಳುತ್ತಿರುವ ಕಾರಣ ಸ್ವಲ್ಪ ಮಟ್ಟಿಗೆ ಪರಿಸ್ಥಿತಿ ನಿಭಾಯಿಸಲಾಗುತ್ತಿದೆ. ರೈತರ ಬೆಳೆ ಹಾಗೂ ಕುಡಿಯುವ ನೀರು ನಮ್ಮ ಆದ್ಯತೆ” ಎಂದು ಹೇಳಿದರು.

ನಿಗಧಿ ಮಾಡಿದಷ್ಟು ನೀರು ಬಿಡುಗಡೆ ಮಾಡಲಾಗಿದೆಯೇ ಎನ್ನುವ ಪ್ರಶ್ನೆಗೆ “ಬಿಡುಗಡೆ ಮಾಡಲು ನೀರೇ ಇಲ್ಲ” ಎಂದು ಪ್ರತಿಕ್ರಿಯೆ ನೀಡಿದರು.