Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

‘ನಾವು ದ್ವೇಷ ರಾಜಕಾರಣ ಮಾಡುತ್ತಿಲ್ಲ, ಕಾನೂನು ಸುವ್ಯವಸ್ಥೆ ಕಾಪಾಡುತ್ತಿದ್ದೇವೆ’: ಡಿಸಿಎಂ

ಬೆಂಗಳೂರು: “ನಾವು ದ್ವೇಷ ರಾಜಕಾರಣ ಮಾಡುತ್ತಿಲ್ಲ. ಕಾನೂನು ಸುವ್ಯವಸ್ಥೆ ಕಾಪಾಡುವ ಕೆಲಸ ಮಾಡುತ್ತಿದ್ದೇವೆ. ನಮ್ಮದು ಶಾಂತಿಪ್ರಿಯ ರಾಜ್ಯ. ಇಲ್ಲಿ ದುಷ್ಕೃತ್ಯಕ್ಕೆ ಅವಕಾಶವಿಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ಸದಾಶಿವನಗರ ನಿವಾಸದ ಬಳಿ , ಹುಬ್ಬಳ್ಳಿಯಲ್ಲಿ ಕರಸೇವಕರ ಬಂಧನ ವಿಚಾರವಾಗಿ ಕೇಳಿದ ಮಾಧ್ಯಮಗಳ ಪ್ರಶ್ನೆಗಳಿಗೆ ಅವರು ಪ್ರತಿಕ್ರಿಯಿಸಿ ಮಾತನಾಡಿ “ಬಿಜೆಪಿ ಈ ವಿಚಾರದಲ್ಲಿ ರಾಜಕೀಯ ಸ್ಟಂಟ್ ಮಾಡುತ್ತಿದೆ. ಬಾಕಿ ಪ್ರಕರಣಗಳ ವಿಲೇವಾರಿಗೆ ಸರ್ಕಾರ ಮುಂದಾಗಿರುವುದಾಗಿ ಗೃಹ ಸಚಿವರು ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಯಾರು ರಾಜ್ಯಕ್ಕೆ ಅಗೌರವ ನೀಡಿದ್ದಾರೆ, ಯಾರು ಕಾನೂನು ಉಲ್ಲಂಘಿಸಿದ್ದಾರೆ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು.

ಬಿಜೆಪಿ ಅವರಿಗೆ 7 ತಿಂಗಳ ಕಾಲ ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡಲು ಸಾಧ್ಯವಾಗಿರಲಿಲ್ಲ. ಈಗ ಚುನಾವಣೆ ಸಮೀಪಿಸುತ್ತಿದೆ. ಹೀಗಾಗಿ ತಾವು ರಾಜಕೀಯವಾಗಿ ಬದುಕಿದ್ದೇವೆ ಎಂದು ತೋರಿಸಿಕೊಳ್ಳಲು ಹೀಗೆ ಮಾತನಾಡುತ್ತಿದ್ದಾರೆ. ಅವರು ಏನಾದರೂ ಮಾಡಿಕೊಳ್ಳಲಿ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವು ಹಾಗೂ ಜನ ಇದಕ್ಕೆ ಉತ್ತರ ನೀಡುತ್ತೇವೆ. ನಾವು ಅವರಂತೆ ಅಧಿಕಾರ ದುರ್ಬಳಕೆ ಮಾಡಿಕೊಂಡು, ಅನ್ಯ ಪಕ್ಷದ ಕಾರ್ಯಕರ್ತರ ಮೇಲೆ ಕೇಸ್ ಹಾಕುತ್ತಿಲ್ಲ. ಬಿಜೆಪಿ ಸರ್ಕಾರ ಇದ್ದಾಗ ಹುಬ್ಬಳ್ಳಿ, ಬೆಂಗಳೂರಿನಲ್ಲಿ ಎಷ್ಟು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಕೇಸ್ ದಾಖಲಿಸಿದೆ ಎಂಬುದನ್ನು ನೋಡಿ. ನಾವು ಇದುವರೆಗೂ ಆ ರೀತಿ ಮಾಡಿಲ್ಲ. ಮುಂದೆಯೂ ಮಾಡಲ್ಲ.”

ಪೊಲೀಸ್ ಠಾಣೆ ಮುತ್ತಿಗೆ ಹಾಕಲು ವಿರೋಧ ಪಕ್ಷದ ನಾಯಕರು ಹುಬ್ಬಳ್ಳಿಗೆ ತೆರಳಿರುವ ಬಗ್ಗೆ ಕೇಳಿದಾಗ, “ಅವರು ಹೋಗಿ ಕಟ್ಟಿ ಹಾಕಿಕೊಳ್ಳಲಿ. ಅವರ ಸರ್ಕಾರದಲ್ಲಿ ಏನೆಲ್ಲಾ ಮಾಡಿದ್ದರು ಎಂದು ನೋಡಿಕೊಳ್ಳಲಿ. ಪೊಲೀಸ್ ಠಾಣೆಯಲ್ಲಿ ಪೊಲೀಸ್ ಸಮವಸ್ತ್ರ ಬದಲು ಕೇಸರಿ ಬಟ್ಟೆ ಹಾಕಿಸಿದರು. ಅಂತಹ ಕೆಲಸ ನಾವು ಮಾಡಿಲ್ಲ” ಎಂದು ತಿರುಗೇಟು ನೀಡಿದರು.

ನಿಮ್ಮ ವಿರುದ್ಧದ ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ನೀಡಿದ್ದು, ತನಿಖೆ ಆರಂಭವಾಗಿರುವ ಬಗ್ಗೆ ಕೇಳಿದಾಗ, “ನನಗೆ ಯಾವುದೇ ರೀತಿಯ ನೊಟೀಸ್ ಬಂದಿಲ್ಲ. ಬಂದ ನಂತರ ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತೇನೆ” ಎಂದು ತಿಳಿಸಿದರು.