Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ನ. 15 ರೊಳಗೆ ಬರ ಪರಿಸ್ಥಿತಿಯ ಅಧ್ಯಯನ ಮಾಡಿ ವರದಿ ಸಲ್ಲಿಸಿ- ಸಚಿವರಿಗೆ ಸಿಎಂ ಸೂಚನೆ

ಮೈಸೂರು: ಎಲ್ಲಾ ಜಿಲ್ಲಾ ಮಂತ್ರಿಗಳು ನವೆಂಬರ್ 15 ರೊಳಗೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಗೆ ಭೇಟಿ ನೀಡಿ ಬರಪರಿಸ್ಥಿತಿಯ ಅಧ್ಯಯನ ಹಾಗೂ, ಜನರನ್ನು ಭೇಟಿ ಮಾಡಿ ವರದಿ ನೀಡುವಂತೆ ಪತ್ರ ಬರೆಯಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.

ಅವರು ಇಂದು ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ,ಕೇಂದ್ರ ಸರ್ಕಾರದಿಂದ ಹಣ ಬಿಡುಗಡೆಯಾಗಿಲ್ಲ ಎಂದು ಯಾವುದೇ ಕೆಲಸ ನಿಲ್ಲಿಸಿಲ್ಲ.ಬರ ಪರಿಹಾರ ಕಾರ್ಯಗಳಿಗೆ 900 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದ್ದು, ಪರಿಹಾರ ಕಾರ್ಯಗಳು ಪ್ರಾರಂಭವಾಗಿವೆ. ಕೇಂದ್ರ ಸರ್ಕಾರದಿಂದ ಹಣ ಬಿಡುಗಡೆಯಾಗಿಲ್ಲ ಎಂದು ಯಾವುದೇ ಕೆಲಸ ನಿಲ್ಲಿಸಿಲ್ಲ ಎಂದರು.

ಕುಡಿಯುವ ನೀರು, ಉದ್ಯೋಗ ನೀಡುವುದು ಯಾವುದೂ ನಿಂತಿಲ್ಲ.ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ 600 ಕೋಟಿ ರೂ.ಗಳ ಬಿಡುಗಡೆ ನಾವು ಪತ್ರ ಬರೆದ ಮೇಲೆ 600 ಕೋಟಿ ರೂ.ಗಳನ್ನು ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ನಿನ್ನೆ ಹಣ ಬಿಡುಗಡೆ ಮಾಡಿದ್ದಾರೆ. 33 ಕೋಟಿ ರೂ.ಗಳಷ್ಟು ಹಾನಿಯಾಗಿದ್ದು, ಮಾರ್ಗಸೂಚಿ ಪ್ರಕಾರ 17900 ಕೋಟಿ ರೂ.ಗಳನ್ನು ಬಿಡುಗಡೆ ಮಾಡಬೇಕೆಂದು ಕೋರಿದ್ದೇವೆ. ಇವತ್ತಿನವರೆಗೆ ನಮ್ಮ ರಾಜ್ಯದ ಮಂತ್ರಿಗಳಿಗೆ ಕೇಂದ್ರ ಸಚಿವರು ಭೇಟಿಗೆ ಅವಕಾಶವನ್ನೇ ನೀಡಿಲ್ಲ. ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತು ಕೃಷಿ ಸಚಿವರನ್ನು ಕಳುಹಿಸಲಾಗಿತ್ತು. ಮೂವರಿಗೆ ಭೇಟಿಗೆ ಅವಕಾಶ ನೀಡಿಲ್ಲ. ಪ್ರಧಾನಮಂತ್ರಿಗಳೂ ಸಮಯಾವಕಾಶ ನೀಡಿಲ್ಲದ ಕಾರಣ ಅವರ ಕೃಷಿ, ಕಂದಾಯ ಹಾಗೂ ಗೃಹ ಕಾರ್ಯದರ್ಶಿಗಳನ್ನು ಭೇಟಿ ಮಾಡಿ ಬಂದಿದ್ದಾರೆ.ಬರ ಪರಿಹಾರಕ್ಕಾಗಿ ಒತ್ತಾಯ ಮಾಡಲು ಪ್ರಧಾನಮಂತ್ರಿಳಿಗೆ ಹಾಗೂ ಗೃಹ ಸಚಿವರಿಗೆ ಪುನಃ ಪತ್ರ ಬರೆಯಲಾಗಿದೆ ಎಂದರು.

ಬಿಜೆಪಿ ಅವರು ರಾಜ್ಯದಲ್ಲಿ ಪ್ರವಾಸ ಮಾಡುತ್ತಿರುವ ಬಗ್ಗೆ ಸುದ್ದಿಗಾರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ ಬಿಜೆಪಿ ಶಾಸಕರು ಇಲ್ಲಿ ಪ್ರವಾಸ ಮಾಡಿ ಏನು ಮಾಡುತ್ತಾರೆ ಎಂದರು. ಅವರಿಗೆ ಕರ್ನಾಟಕದ ರೈತರ ಬಗ್ಗೆ ನಿಜವಾಗಿಯೂ ಕಾಳಜಿ ಇದ್ದರೆ ದೆಹಲಿಗೆ ತೆರಳಿ ಹಣ ಬಿಡುಗಡೆ ಮಾಡಿಸಲಿ ಎಂದರು.

ಕೆ.ಇ. ಎ ಪರೀಕ್ಷೆ ಅಕ್ರಮ:

ಕಲಬುರಗಿಯಲ್ಲಿ ಕೆ.ಇ. ಎ ಪರೀಕ್ಷೆಯಲ್ಲಿ ತಾಳಿ, ಕಾಲುಂಗುರ ಬಿಚ್ಚಿಸಿದ್ದು, ಬ್ಲೂಟೂತ್ ಬಳಕೆಯಾಗುವ ಬಗ್ಗೆ ಮಾತನಾಡಿ ಈ ಬಗ್ಗೆ ಸಂಪೂರ್ಣ ತನಿಖೆ ಮಾಡಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.

ಗಣಿಗಾರಿಕೆ ಅಧಿಕಾರಿ ಪ್ರತಿಮಾ ಅವರು ಕೊಲೆಯಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಒಬ್ಬಂಟಿಗಳಾಗಿದ್ದ ಅವರ ಕೊಲೆಯಾಗಿರುವ ಬಗ್ಗೆ ಈಗಷ್ಟೇ ಗಮನಕ್ಕೆ ಬಂದಿದೆ. ಕಾರಣ ಏನೆಂದು ತಿಳಿದುಬಂದಿಲ್ಲ ಈ ಬಗ್ಗೆ ವಿಚಾರ ಮಾಡುವುದಾಗಿ ತಿಳಿಸಿದರು.

ಮುಖ್ಯಮಂತ್ರಿಗಳ ಕುರ್ಚಿ ಇವತ್ತು ನಾಳೆ ಬೀಳಲಿದೆ ಎಂದು ಬಿಜೆಪಿ, ಜೆಡಿಎಸ್ ಹೇಳಿಕೆ ನೀಡುತ್ತಿರುವ ಬಗ್ಗೆ ಮಾತನಾಡಿ,  ಅವರು ಸರ್ಕಾರ ರಚಿಸುವುದಾಗಿ ಭಾವಿಸಿದ್ದರು. ಅದಾಗದೆ ಇದ್ದುದರಿಂದ ಹತಾಶರಾಗಿದ್ದಾರೆ ಎಂದರು.

ಸಿಎಂ ಕುರ್ಚಿ ಬಗ್ಗೆ ಬಿಜೆಪಿ ಚರ್ಚೆ ಮಾಡುತ್ತಿದ್ದಾರೆ. ನಮ್ಮ ಶಾಸಕರು ಸಚಿವರು ಈ ಬಗ್ಗೆ ಮಾತನಾಡಕೂಡದು ಎಂದು ತಿಳಿಸಲಾಗಿದೆ. ಲೋಕಸಭೆ ಚುನಾವಣೆ ಬಗ್ಗೆ ಚರ್ಚೆ ಮಾಡಲಾಗಿದ್ದು, ಇನ್ನು ಮುಂದೆ ಮುಖ್ಯಮಂತ್ರಿಗಳ ಸ್ಥಾನದ ಬಗ್ಗೆ ಮಾತನಾಡಬಾರದು. ಏನಿದ್ದರೂ ನಿಮ್ಮ ಕ್ಷೇತ್ರಗಳ ಸಾಧನೆಗಳ ಬಗ್ಗೆ ಮಾತನಾಡಿ ಎಂದು ಸೂಚಿಸಲಾಗಿದೆ ಎಂದರು.

ನಾಳೆಯೇ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಗಳಾದರೆ ತಮ್ಮ 17 ಶಾಸಕರ ಬೆಂಬಲ ನೀಡುವುದಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿ ಅದು ವ್ಯಂಗ್ಯ ವಾಗಿ ಹೇಳಿರುವುದು. ಕುಮಾರಸ್ವಾಮಿ ಅವರಿಗೆ ವ್ಯಂಗ್ಯ ವಾಗಿ ಹೇಳುವುದೂ ಬರುತ್ತದೆ ಎನ್ನುವುದೇ ನಮಗೆ ಖುಷಿ ಎಂದರು.

ಈಶ್ವರಪ್ಪ ಸವಕಲು ನಾಣ್ಯ ಕಾಂತರಾಜು ವರದಿ ಸುಟ್ಟುಹಾಕಬೇಕೆಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ ಕಾಂತರಾಜು ವರದಿ ಜಾರಿ ಮಾಡಿ ಎಂದು ಈಶ್ವರಪ್ಪ ಭಾಷಣ ಮಾಡಿದ್ದರು. ಅವರ ಮಾತಿಗೆ ಬೆಲೆ ಇದೆಯೇ. ಅವರೆಲ್ಲಾ ಸವಕಲು ನಾಣ್ಯಗಳು. ಬಿಜೆಪಿಯಲ್ಲಿಯೇ ಅವರು ಸವಕಲು ನಾಣ್ಯ ಎಂದು ಟಿಕೆಟ್ ನೀಡಿಲ್ಲ. ಅವರ ಮಾತ್ಯಗಳಿಗೆ ಏನು ಬೆಲೆ ಇದೆ. ವರದಿ ನೀಡಿದರೆ ಅದನ್ನು ಸ್ವೀಕರಿಸುತ್ತೇವೆ ಎಂದರು. ವರದಿಯಲ್ಲಿ ಏನಿದೆ ಎಂದು ನಮಗೆ ತಿಳಿದಿಲ್ಲ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.