Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಪತನದತ್ತ ಹಿಮಾಚಲ ಪ್ರದೇಶ ಕಾಂಗ್ರೆಸ್ ಸರ್ಕಾರ – 26 “ಕೈ” ಶಾಸಕರು ರೆಬೆಲ್ – ಡಿಕೆಶಿ, ಹರಿಯಾಣ ಮಾಜಿ ಸಿಎಂ ದೌಡು

ಶಿಮ್ಲಾ : ಹಿಮಾಚಲ ಪ್ರದೇಶದಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಪತನದ ಅಂಚಿನಲ್ಲಿದೆ. 26 ಕೈ ಶಾಸಕರು ರೆಬೆಲ್ ಆಗಿದ್ದು, ಸಿಎಂ ಸುಖು ವಿರುದ್ಧ ಅಸಮಾಧಾನಗೊಂಡಿದ್ದಾರೆ.

ನಿನ್ನೆ, ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಭಾರಿ ಮುಖಭಂಗ ಅನುಭವಿಸಿದ್ದು, ಅಚ್ಚರಿ ಎಂಬಂತೆ ಬಿಜೆಪಿ ಜಯಗಳಿಸಿದೆ. ಈ ಸೋಲು ಕಾಂಗ್ರೆಸ್ ಸರ್ಕಾರವನ್ನೇ ಉರುಳಿಸುವ ಸುಳಿವನ್ನು ಕೂಡ ನೀಡಿದೆ. ಕಾಂಗ್ರೆಸ್​ ಶಾಸಕರೇ ಅಡ್ಡಮತದಾನ ಮಾಡಿರುವ ಹಿನ್ನೆಲೆಯಲ್ಲಿ ಸಿಎಂ ಸುಖ್ವಿಂದರ್​ ಸಿಂಗ್ ಸುಖು ಶಾಸಕರ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ಹೇಳಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಕೈಗೊಳ್ಳಲು ಬಿಜೆಪಿ ಮುಂದಾಗಿದೆ.

ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್​ ಸರ್ಕಾರವಿದ್ದು, 68 ಸದಸ್ಯರ ವಿಧಾನಸಭೆಯಲ್ಲಿ 40 ಶಾಸಕರ ಸಂಖ್ಯಾಬಲವನ್ನು ಹೊಂದಿದೆ. ಹೀಗಾಗಿ, ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಹಿರಿಯ ನಾಯಕ, ಸುಪ್ರೀಂಕೋರ್ಟ್ ವಕೀಲ ಅಭಿಷೇಕ್ ಮನುಸಿಂಘಿ ಗೆಲುವು ಸುಲಭದ ತುತ್ತಾಗಬೇಕಿತ್ತು. ಆದರೆ, ಭಾರಿ ಕಾರ್ಯಾಚರಣೆ ನಡೆಸಿದ ಬಿಜೆಪಿ ನಾಯಕರು, 6 ಕಾಂಗ್ರೆಸ್ ಶಾಸಕರಿಂದ ಅಡ್ಡಮತದಾನ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ, 3 ಪಕ್ಷೇತರ ಶಾಸಕರು ಕೂಡ ಬಿಜೆಪಿ ಅಭ್ಯರ್ಥಿ ಬೆಂಬಲಿಸಿ ಮತ ಹಾಕಿದ್ದು, ಇದರಿಂದಾಗಿ ಬಿಜೆಪಿ ಹರ್ಷ ಮಹಾಜನ್ ಗೆಲುವು ಸಾಧಿಸಿದ್ದಾರೆ. ಒಟ್ಟು 26 ಶಾಸಕರು ಸಿಎಂ ಸುಖು ವಿರುದ್ಧ ಅಸಮಾಧಾನಗೊಂಡಿದ್ದಾರೆ ಮತ್ತು ಸಿಎಂ ಬದಲಾವಣೆಯನ್ನೂ ಬಯಸಿದ್ದಾರೆ. ಅಡ್ಡ ಮತದಾನ ಮಾಡಿದ ಶಾಸಕರೇ ಇದನ್ನು ಬಹಿರಂಗವಾಗಿ ಹೇಳಿದ್ದು, ಹಿಮಾಚಲ ಪ್ರದೇಶದ ಕಾಂಗ್ರೆಸ್​ ಸರ್ಕಾರದ ಬುಡ ಅಲುಗಾಡುತ್ತಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಕಾಂಗ್ರೆಸ್​ ಹೈಕಮಾಂಡ್​, ಕರ್ನಾಟಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಮತ್ತು ಹರಿಯಾಣ ಮಾಜಿ ಸಿಎಂ ಭೂಪಿಂದ್ರ ಹೂಡಾರನ್ನು ಕಳುಹಿಸಿ, ಅಸಮಾಧಾನಿತರ ಜತೆ ಮಾತುಕತೆ ನಡೆಸಲು ಸೂಚಿಸಲಾಗಿದೆ.