Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಪರೀಕ್ಷಾ ಅಕ್ರಮ ತಡೆಗೆ ಮಹತ್ವದ ಕ್ರಮ : 10 ಕೋಟಿ ದಂಡ, 12 ವರ್ಷ ವರ್ಷ ಜೈಲು, ಆಸ್ತಿ ಜಪ್ತಿ

ಬೆಂಗಳೂರು : ನೇಮಕಾತಿ ಪರೀಕ್ಷೆಗಳಲ್ಲಿನ ಅಕ್ರಮ ರಾಜ್ಯ ಸರ್ಕಾರದ ನಿದ್ದೆಗೆಡಿಸುತ್ತಿದೆ. ಇದೀಗ ಈ ಅಕ್ರಮ ತಡೆಯಲು ರಾಜ್ಯ ಸರ್ಕಾರ ಮುಂದಿನ ಬೆಳಗಾವಿ ಅಧಿವೇಶನದಲ್ಲಿ ಪ್ರತ್ಯೇಕ ಕಾಯ್ದೆ ತರಲು ತೀರ್ಮಾನಿಸಿದೆ. ಕರ್ನಾಟಕ ಪಬ್ಲಿಕ್ ಎಕ್ಸಾಮಿನೇಷನ್‌ (ನೇಮಕಾತಿಯಲ್ಲಿ ಭ್ರಷ್ಟಾಚಾರ ಮತ್ತು ಅನ್ಯಾಯದ ವಿಧಾನ ತಡೆಗಟ್ಟುವಿಕೆ ಕ್ರಮಗಳು) ವಿಧೇಯಕ-2023 ಮಂಡಿಸಲು ತೀರ್ಮಾನಿಸಿದ್ದು, ಇದರಡಿ ಪರೀಕ್ಷಾ ಅಕ್ರಮ ಎಸಗಿದವರಿಗೆ 10 ಕೋಟಿ ರು.ವರೆಗೆ ದಂಡ, 12 ವರ್ಷದವರೆಗೆ ಜೈಲು ಶಿಕ್ಷೆ ಹಾಗೂ ಅಕ್ರಮ ಆಸ್ತಿ ಜಪ್ತಿಯಂತಹ ಕಠಿಣ ನಿಯಮಗಳನ್ನು ಜಾರಿಗೆ ತರಲು ಪ್ರಸ್ತಾಪಿಸಲಾಗಿದೆ. ಕಾಯ್ದೆಯಲ್ಲಿನ ಕಠಿಣ ನಿಯಮಗಳು: ಒಂದು ವೇಳೆ ಪರೀಕ್ಷಾರ್ಥಿ ಕಾನೂನುಬಾಹಿರ ಕೃತ್ಯದಲ್ಲಿ ತೊಡಗಿ ಅಕ್ರಮದಲ್ಲಿ ಭಾಗಿಯಾಗಿರುವುದು ದೃಢಪಟ್ಟರೆ ಅಪರಾಧಿಗೆ ಗರಿಷ್ಠ ಐದು ವರ್ಷದವರೆಗೆ ಜೈಲು ಶಿಕ್ಷೆ ವಿಧಿಸುವುದು. ಜತೆಗೆ 10 ಲಕ್ಷ ರು.ಗೆ ಕಡಿಮೆ ಇಲ್ಲದಂತೆ ದಂಡ ಹಾಗೂ ದಂಡ ಕಟ್ಟಲು ವಿಫಲನಾದರೆ 9 ತಿಂಗಳ ಜೈಲು ಶಿಕ್ಷೆ ವಿಧಿಸಲು ಅವಕಾಶ ನೀಡಲಾಗಿದೆ. ಒಂದು ವೇಳೆ ಮೂರನೇ ವ್ಯಕ್ತಿ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮಕ್ಕೆ ಸಂಚು ರೂಪಿಸಿದರೆ ಅಥವಾ ಅಕ್ರಮದಲ್ಲಿ ಭಾಗಿಯಾದರೆ ಆತನಿಗೆ 8 ವರ್ಷಕ್ಕಿಂತ ಕಡಿಮೆ ಇಲ್ಲದಂತೆ ಗರಿಷ್ಠ 12 ವರ್ಷದವರೆಗೆ ಜೈಲು ಶಿಕ್ಷೆ ವಿಧಿಸುವ ಕಾನೂನು ಸೇರಿಸಲಾಗಿದೆ. ಜತೆಗೆ 15 ಲಕ್ಷ ರು. ಗೆ ಕಡಿಮೆ ಇಲ್ಲದಂತೆ ಗರಿಷ್ಠ 10 ಕೋಟಿ ರು.ವರೆಗೆ ದಂಡ ವಿಧಿಸಲಾಗುತ್ತದೆ. ದಂಡ ಕಟ್ಟಲು ವಿಫಲನಾದರೆ ಎರಡು ವರ್ಷವರೆಗೆ ಜೈಲುವಾಸ ಅನುಭವಿಸಬೇಕು ಎಂದು ಪ್ರಸ್ತಾವಿತ ನಿಯಮಗಳಲ್ಲಿ ತಿಳಿಸಲಾಗಿದೆ. ತಪ್ಪಿತಸ್ಥ ಅಕ್ರಮದಿಂದ ಗಳಿಸಿದ ಸ್ಥಿರ ಅಥವಾ ಚರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಬಗ್ಗೆ ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ. ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಎಸಗಿದಲ್ಲಿ ಜಾಮೀನು ರಹಿತ ಅಪರಾಧವಾಗಲಿದೆ. ನೇಮಕಾತಿ ಪರೀಕ್ಷೆ ಅಕ್ರಮ ಗಂಭೀರ ಸ್ವರೂಪದ ಪ್ರಕರಣ ಎಂದು ಪರಿಗಣಿಸಲಾಗಿದೆ. ಪರೀಕ್ಷಾರ್ಥಿ ತಪ್ಪಿತಸ್ಥ ಎಂದು ದೃಢಪಟ್ಟರೆ ಮುಂದಿನ ಎರಡು ವರ್ಷ ಯಾವುದೇ ನೇಮಕಾತಿ ಪರೀಕ್ಷೆಗಳಿಂದ ಡಿಬಾರ್ ಆಗಲಿದ್ದಾನೆ.