Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಪಿಎಂ ಮೋದಿ, ಯುಪಿ ಸಿಎಂ ಯೋಗಿ, ಅಮಿತ್ ಶಾ, ಜೆಪಿ ನಡ್ಡಾ, ರಾಜನಾಥಸಿಂಗ್ ಸೇರಿ ರಾಜ್ಯಕ್ಕೆ ಬಿಜೆಪಿ ನಾಯಕರ ದಂಡು!

ಬೆಂಗಳೂರು : ಲೋಕಸಭೆ ಚುನಾವಣೆಯಲ್ಲಿ ಹೇಗಾದರೂ ಮಾಡಿ ಕರ್ನಾಟಕದಲ್ಲಿ 28ರಲ್ಲಿ ಇಪ್ಪತೈದಕ್ಕೂ ಅಧಿಕ ಸೀಟ್‌ಗಳನ್ನು ಗೆಲ್ಲಲೇಬೇಕೆಂದು ಬಿಜೆಪಿ ನಾಯಕರ ದಂಡು ಪಣ ತೊಟ್ಟಿದೆ. ಅದಕ್ಕಾಗಿ ಕರ್ನಾಟಕಕ್ಕೆ ಬಂದು ಬಿರುಸಿನ ಪ್ರಚಾರ ನಡೆಸಲಿದೆ.

ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಈ ಬಗ್ಗೆ ಇಂದು ಸುದ್ದಿಗೋಷ್ಠಿ ನಡೆಸಿದ ಮಾಜಿ ಸಚಿವ ಸುನೀಲ್ ಕುಮಾರ್ ಈ ಕುರಿತಂತೆ ಸಂಪೂರ್ಣ ಮಾಹಿತಿ ನೀಡಿದರು. ಪ್ರಧಾನಿ ಮೋದಿ ಭಾಗವಹಿಸುವ ಚಿಕ್ಕಬಳ್ಳಾಪುರ ಮತ್ತು ಕೋಲಾರ ಲೋಕಸಭಾ ಕ್ಷೇತ್ರಗಳ ಚುನಾವಣಾ ಪ್ರಚಾರ ಸಭೆಯು ಇದೇ 20ರಂದು ಮಧ್ಯಾಹ್ನ ಚಿಕ್ಕಬಳ್ಳಾಪುರದಲ್ಲಿ ನಡೆಯಲಿದ್ದು, ಸುಮಾರು 1 ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಅಂದು ಸಂಜೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್ ಸಾರ್ವಜನಿಕ ಸಭೆ ಏರ್ಪಡಿಸಲಾಗುತ್ತದೆ. ಬೆಂಗಳೂರು ದಕ್ಷಿಣ, ಬೆಂಗಳೂರು ಮಧ್ಯ, ಬೆಂಗಳೂರು ಉತ್ತರ ಕ್ಷೇತ್ರಗಳು, ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳ ಸಭೆ ಇದಾಗಿರುತ್ತದೆ. ಎರಡು ಕಡೆಗಳಲ್ಲಿ ವಿಜಯ ಸಂಕಲ್ಪ ಸಮಾವೇಶ ನಡೆಯಲಿದ್ದು, ಸಿದ್ಧತಾ ಕಾರ್ಯ ಭರದಿಂದ ಸಾಗಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರವಾಸವೂ ಕೂಡ ನಿಗದಿಯಾಗಿದ್ದು, ಇದೇ ತಿಂಗಳ 23, 24ರಂದು ಕರ್ನಾಟಕದಲ್ಲಿ ವಿವಿಧ ಚುನಾವಣಾ ಪ್ರಚಾರ ಸಭೆಗಳಲ್ಲಿ ಭಾಗವಹಿಸುತ್ತಾರೆ. 23ರಂದು ಬೆಳಿಗ್ಗೆ ಯಶವಂತಪುರದಲ್ಲಿ ರೋಡ್ ಶೋ ಬಳಿಕ ಯಲಹಂಕದಲ್ಲಿ ಸಾರ್ವಜನಿಕ ಸಭೆ ಇರುತ್ತದೆ. ಸಂಜೆ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರೋಡ್ ಶೋ ನಡೆಯಲಿದೆ. ನಂತರ ಮಹದೇವಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ರೋಡ್ ಶೋ ನಿಗದಿಯಾಗಿದೆ. 24 ರಂದು ಬೆಳಿಗ್ಗೆ ಚಿಕ್ಕಮಗಳೂರಿನಲ್ಲಿ ಸಾರ್ವಜನಿಕ ಸಭೆ, ಮಧ್ಯಾಹ್ನ ತುಮಕೂರಿನಲ್ಲಿ ಏರ್ಪಡಿಸಲಾಗುವ ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ಪ್ರಧಾನಿ ಭಾಗವಹಿಸಲಿದ್ದಾರೆ. ಅಂದು ಸಂಜೆಯೇ ಹುಬ್ಬಳ್ಳಿಯಲ್ಲಿ ನಡೆಸಲಾಗುವ ರೋಡ್ ಶೋದಲ್ಲಿ ಪಾಲ್ಗೊಳ್ಳುತ್ತಾರೆ. ಇನ್ನು, ಇದೇ 24ರಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕರ್ನಾಟಕಕ್ಕೆ ಆಗಮಿಸಲಿದ್ದು, ಚುನಾವಣಾ ಪ್ರಚಾರ ಸಭೆಗಳಲ್ಲಿ ಭಾಗವಹಿಸುತ್ತಾರೆ. ಅಂದು ಬೆಳಿಗ್ಗೆ ಬೆಂಗಳೂರಿನ ಆರ್.ಆರ್.ನಗರ ವಿಧಾನಸಭಾ ಕ್ಷೇತ್ರದಲ್ಲಿ ರೋಡ್ ಶೋ, ಮಧ್ಯಾಹ್ನ ಮಡಿಕೇರಿಯಲ್ಲಿ ಸಾರ್ವಜನಿಕ ಸಭೆ, ಸಂಜೆ ಉಡುಪಿಯ ಮಲ್ಪೆಯಲ್ಲಿ ಏರ್ಪಡಿಸಲಾಗುವ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ. ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಏ.21ರಂದು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಏ.24ರಂದು ರಾಜ್ಯ ಪ್ರವಾಸ ಮಾಡಲಿದ್ದಾರೆ ಎಂದು ಮಾಜಿ ಸಚಿವ ಸುನೀಲ್ ಕುಮಾರ್ ಹೇಳಿದರು.